ADVERTISEMENT

‘ಮಿಷನ್‌ ಸಾಹಸಿ’ಯರಾದ ವಿದ್ಯಾರ್ಥಿನಿಯರು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 20:16 IST
Last Updated 30 ಅಕ್ಟೋಬರ್ 2018, 20:16 IST
ವಿದ್ಯಾರ್ಥಿನಿಯರು ಮಾರ್ಷಲ್‌ ಆರ್ಟ್ಸ್‌ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ
ವಿದ್ಯಾರ್ಥಿನಿಯರು ಮಾರ್ಷಲ್‌ ಆರ್ಟ್ಸ್‌ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ಮಂಗಳವಾರ, ಒಂದೆಡೆ ಸೇರಿದ್ದ ಎರಡು ಸಾವಿರ ವಿದ್ಯಾರ್ಥಿನಿಯರು ಮಾರ್ಷಲ್‌ ಆರ್ಟ್ಸ್‌ ಹಾಗೂ ಕರಾಟೆಯನ್ನು ಪ್ರದರ್ಶಿಸಿದರು.

ಸೆಂಟ್ರಲ್‌ ಕಾಲೇಜು ಮೈದಾನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಆಯೋಜಿಸಿದ್ದ ‘ಮಿಷನ್‌ ಸಾಹಸಿ’ ಕಾರ್ಯಕ್ರಮದಲ್ಲಿ ನಗರದ ಸುಮಾರು 100 ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ನಾಗಾರ್ಜುನ, ನಿಟ್ಟೆ ಮೀನಾಕ್ಷಿ, ರೇವಾ, ಆಚಾರ್ಯ, ವಿಜಯಾ, ಎನ್‌ಎಂಕೆಆರ್‌ವಿ, ಶೇಷಾದ್ರಿಪುರಂ, ಮಹಾರಾಣಿ, ಎಂಇಎಸ್‌, ವಿಎಚ್‌ಡಿ ಹೋಮ್ ಸೈನ್ಸ್‌ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ತಾವು ಕಲಿತ ಸ್ವಯಂ ರಕ್ಷಣಾ ತಂತ್ರಗಳನ್ನು ಪ್ರದರ್ಶಿಸಿದರು.

ADVERTISEMENT

ಅಕ್ಟೋಬರ್‌ 22 ರಿಂದ 28ರವರೆಗೆ ವಿದ್ಯಾರ್ಥಿನಿಯರು ಪ್ರತಿದಿನ ಎರಡು ತಾಸು ಮಾರ್ಷಲ್‌ ಆರ್ಟ್ಸ್‌ ಅಭ್ಯಾಸ ಮಾಡಿದ್ದಾರೆ. ಗ್ರ್ಯಾಂಡ್‌ ಮಾಸ್ಟರ್‌ ಪ್ರವೀಣ್‌ ರಂಕಾ ಅವರು ಈ ಕಲೆಯನ್ನು ಕಲಿಸಿದ್ದಾರೆ.

ಹಿರಿಯ ನಟಿ ಶ್ರುತಿ, ‘ಹೆಣ್ಣುಮಕ್ಕಳಿಗೆ ಸ್ವಯಂ ರಕ್ಷಣೆ ಅನಿವಾರ್ಯವಾಗಿರುವುದೇ ನಾಚಿಕೆಗೇಡಿನ ಸಂಗತಿ. ಶೋಷಣೆಯ ಭಯ ನಮಗೆ ಮಾತ್ರ ಯಾಕೆ? ನಾವು ಎಲ್ಲಾ ಕಡೆ ಓಡಾಡೋ ಸ್ಥಿತಿ ಯಾಕೆ ಇಲ್ಲ? ಅಮ್ಮ, ಮನೆಯಿಂದ ಹೊರಗೆ ಹೋಗುವ ಮಗಳಿಗೆ, ಎಲ್ಲಿಗೆ ಹೋಗುತ್ತಿದ್ದೀಯಾ? ಎಷ್ಟು ಗಂಟೆಗೆ ಬರುತ್ತೀಯಾ? ಎಂದು ಕೇಳುತ್ತಾರೆ. ಆದರೆ ಅದೇ ಪ್ರಶ್ನೆಯನ್ನು ಗಂಡುಮಕ್ಕಳಿಗೆ ಕೇಳಿದರೆ ನಮಗೆ ಈ ಸ್ಥಿತಿ ಬರುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.