ಬೆಂಗಳೂರು: ಮೂಲಸೌಕರ್ಯಗಳನ್ನು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
‘ಮಹಾರಾಣಿ ಕಾಲೇಜಿನಲ್ಲಿ ಶೌಚಾಲಯಗಳು ಅತ್ಯಂತ ಕೆಟ್ಟ ಸ್ಥಿತಿಯಲ್ಲಿವೆ. ಮೂಲಸೌಕರ್ಯವಿಲ್ಲದೇ ವಿದ್ಯಾರ್ಥಿಗಳು ಪ್ರತಿನಿತ್ಯ ಪರದಾಡುವ ಪರಿಸ್ಥಿತಿ ಎದುರಾಗಿದೆ. ಸರಿಯಾದ ಸಮಯಕ್ಕೆ ಪರೀಕ್ಷಾ ಫಲಿತಾಂಶ ಪ್ರಕಟಿಸುತ್ತಿಲ್ಲ. ಕೆಲ ವಿದ್ಯಾರ್ಥಿಗಳ ಫಲಿತಾಂಶಗಳಲ್ಲಿ ಅನೇಕ ತಪ್ಪುಗಳಿವೆ’ ಎಂದು ಪ್ರತಿಭಟನನಿರತ ವಿದ್ಯಾರ್ಥಿಗಳು ಆರೋಪಿಸಿದರು.
‘ರಾಷ್ಟ್ರೀಯ ಶಿಕ್ಷಣ ನೀತಿ–2020 (ಎನ್‌ಇಪಿ) ಪರಿಚಯಿಸಿರುವ ಓಪನ್ ಎಲೆಕ್ಟಿವ್ ವಿಷಯಗಳ ತರಗತಿಗಳೇ ನಡೆಯುತ್ತಿಲ್ಲ. ಒಂದು ವಾರದಿಂದ ಅತಿಥಿ ಉಪನ್ಯಾಸಕರು ತರಗತಿಗಳನ್ನು ತೆಗೆದುಕೊಳ್ಳದೇ ಹೋರಾಟ ಮಾಡುತ್ತಿದ್ದಾರೆ. ಇದರಿಂದ, ಯಾವ ತರಗತಿಗಳು ನಡೆಯುತ್ತಿಲ್ಲ. ಮಹಾರಾಣಿ ಕಾಲೇಜು ಸಮಸ್ಯೆಗಳ ಆಗರವಾಗಿದ್ದು, ಕೂಡಲೇ ಇಲ್ಲಿನ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು’ ಎಂದು ಆಗ್ರಹಿಸಿದರು.
ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್ಓ) ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.