ADVERTISEMENT

ವಿದ್ಯಾರ್ಥಿಗಳು ಪಠ್ಯಕ್ಕೆ ಸೀಮಿತವಾಗಬಾರದು: ಪಿಚ್ಚಳ್ಳಿ ಶ್ರೀನಿವಾಸ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 16:33 IST
Last Updated 8 ನವೆಂಬರ್ 2024, 16:33 IST
   

ಬೆಂಗಳೂರು: ‘ವಿದ್ಯಾರ್ಥಿಗಳು ಪಠ್ಯದ ಹುಳುಗಳಾಗದೆ, ಪಠ್ಯೇತರ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದು ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ ತಿಳಿಸಿದರು.

ನಗರದ ಎಚ್‌.ಎಸ್‌.ಆರ್‌. ಬಡಾವಣೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ‌ಸಾಂಸ್ಕೃತಿಕ ಸಮಿತಿ ಆಯೋಜಿಸಿದ್ದ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌.ಸಿ.ಸಿ, ಎನ್‌.ಎಸ್‌.ಎಸ್‌ ಮತ್ತು ಇತರೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

‘ವಿದ್ಯಾರ್ಥಿಗಳು ಕ್ರೀಡೆ, ಎನ್‌.ಎಸ್‌.ಎಸ್‌ನಂತಹ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಈ ಮೂಲಕ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಿಗೆ ಸ್ಪಂದಿಸಬೇಕು. ಕನ್ನಡ ನಾಡಿನ ಸಂಸ್ಕೃತಿ ಮತ್ತು ಪರಂಪರೆ ಹಳ್ಳಿಗಾಡಿನ ದುಡಿಯುವ ಜನ ಸಮುದಾಯಗಳ ಕಸುವಿನಲ್ಲಿದೆ. ವಿದ್ಯಾರ್ಥಿಗಳು ಈ ಕಸುವಿನ ಭಾಗವಾಗಬೇಕು’ ಎಂದರು.

ADVERTISEMENT

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಸತೀಶ್‌ ರೆಡ್ಡಿ, ‘ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ಪಾಲ್ಗೊಂಡು, ನಮ್ಮ ವ್ಯಕ್ತಿತ್ವಗಳನ್ನು ಕ್ರಿಯಾಶೀಲವಾಗಿಸಿಕೊಳ್ಳಬೇಕು. ಕುಟುಂಬ ಮತ್ತು ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

ಪ್ರಾಂಶುಪಾಲ ಪಾಪಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಂಘದ ಸಂಚಾಲಕಿ ಚಂದ್ರಕಲಾ ಎಂ., ಸದಸ್ಯರಾದ ಬೈರೇಗೌಡ,ಮೇನಕಾ ತಮ್ಮಯ್ಯ, ರಘು ಸಿ., ಲಕ್ಷ್ಮಿ ಕೆ., ನರೇಂದ್ರ ಎನ್‌. ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.