ADVERTISEMENT

ಬ್ರ್ಯಾಂಡ್‌ ಬೆಂಗಳೂರು: ಖಜಾನೆ ತುಂಬಿಸುವ ಕಚೇರಿಗಳಿಗೇ ಸ್ವಂತ ಕಟ್ಟಡವಿಲ್ಲ

ಬಾಡಿಗೆ ಕಟ್ಟಡಗಳಲ್ಲೇ ಕಾರ್ಯನಿರ್ವಹಿಸುತ್ತಿರುವ ಉಪ ನೋಂದಣಾಧಿಕಾರಿಗಳ ಕಚೇರಿಗಳು; ಮೂಲ ಸೌಕರ್ಯಗಳು ಸಿಗದೆ ಜನರ ಪರದಾಟ

ಜಿ.ಶಿವಕುಮಾರ
Published 29 ನವೆಂಬರ್ 2021, 19:32 IST
Last Updated 29 ನವೆಂಬರ್ 2021, 19:32 IST
ಕೋಣನಕುಂಟೆ ಕ್ರಾಸ್‌ನಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಅಂತರ ಮರೆತು ನಿಂತಿರುವ ನಾಗರಿಕರು ಪ್ರಜಾವಾಣಿ ಚಿತ್ರಗಳು/ ಪ್ರಶಾಂತ್ ಎಚ್.ಜಿ.
ಕೋಣನಕುಂಟೆ ಕ್ರಾಸ್‌ನಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಅಂತರ ಮರೆತು ನಿಂತಿರುವ ನಾಗರಿಕರು ಪ್ರಜಾವಾಣಿ ಚಿತ್ರಗಳು/ ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಆ ಕಚೇರಿಗಳಿಂದ ಸರ್ಕಾರದ ಬೊಕ್ಕಸಕ್ಕೆ ವರ್ಷಕ್ಕೆ ಕೋಟಿ ಕೋಟಿ ಆದಾಯ ಹರಿದು ಬರುತ್ತದೆ. ಅವು ಸದಾ ಸಾರ್ವಜನಿಕರಿಂದ ಗಿಜಿಗುಡುತ್ತಿರುತ್ತವೆ. ಹೀಗಿದ್ದರೂ ಆ ಕಚೇರಿಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ!

ನಗರದ ಬಹುಪಾಲು ಉಪ ನೋಂದಣಾಧಿಕಾರಿ ಕಚೇರಿಗಳ ವ್ಯಥೆ ಇದು.

ಆಸ್ತಿ ನೋಂದಣಿ ಮಾಡುವ ಈ ಕಚೇರಿಗಳು ಈಗಲೂ ಬಾಡಿಗೆ ಕಟ್ಟಡಗಳಲ್ಲೇ ಕಾರ್ಯನಿರ್ವಹಿಸು ತ್ತಿವೆ. ಕಟ್ಟಡದ ಮಾಲೀಕರು ಸೂಚಿಸಿದರೆ ಮರು ಮಾತನಾಡದೇ ಜಾಗ ಖಾಲಿ ಮಾಡಬೇಕು. ಹೀಗಾಗಿ ಕಚೇರಿ ಸ್ಥಳಾಂತರದ ಜಂಜಡದಿಂದಲೇ ಅಧಿಕಾರಿಗಳು ಅರ್ಧ ಹೈರಾಣಾಗಿದ್ದಾರೆ. ನಾಗರಿಕರ ಪರದಾಟಕ್ಕೂ ಕೊನೆ ಇಲ್ಲದಂತಾಗಿದೆ. ನೂರಾರು ವರ್ಷಗಳಷ್ಟು ಹಳೆಯದಾದ ದಾಖಲೆಗಳ ಸಂರಕ್ಷಣೆಯೂ ಸವಾಲಾಗಿದೆ.

ADVERTISEMENT

ನಗರದಲ್ಲಿ 43 ಉಪ ನೋಂದಣಾಧಿಕಾರಿ ಕಚೇರಿ ಗಳಿವೆ. ಈ ಪೈಕಿ ನೋಂದಣಿ ಮಹಾ ‍ಪರಿವೀಕ್ಷಕ ಮತ್ತು ಆಯುಕ್ತರು, ಬಿಡಿಎ, ಆನೇಕಲ್‌, ಬ್ಯಾಟರಾಯನಪುರ ಹಾಗೂ ಯಲಹಂಕದಲ್ಲಿನ ಕಚೇರಿಗಳಿಗೆ ಸ್ವಂತ ಕಟ್ಟಡಗಳಿವೆ. ಉಳಿದವುಗಳಿಗೆ ಈ ‘ಭಾಗ್ಯ’ ಇಲ್ಲ.

ರಸ್ತೆ ದಾಟುವ ಸವಾಲು: ವಿಜಯನಗರ, ಕೋಣನಕುಂಟೆ ಕ್ರಾಸ್‌, ಗಾಂಧಿ ಬಜಾರ್‌, ಜಯನಗರ, ದೊಮ್ಮಲೂರು ಸೇರಿದಂತೆ ಹಲವು ಉಪ ನೋಂದಣಾಧಿಕಾರಿ ಹಾಗೂ ವಿವಾಹ ನೋಂದಣಾಧಿಕಾರಿಗಳ ಕಚೇರಿಗಳು ಮುಖ್ಯ ರಸ್ತೆಗೆ ತಾಗಿಕೊಂಡಂತೆಯೇ ಇವೆ. ಈ ಕಚೇರಿಗಳನ್ನು ತಲುಪಲು ನಾಗರಿಕರು ಪರದಾಡುವಂತಾಗಿದೆ. ವಾಹನಗಳಿಂದ ಗಿಜಿಗುಡುವ ರಸ್ತೆಗಳನ್ನು ದಾಟಬೇಕಾದರೆ ಮೈಯೆಲ್ಲಾ ಕಣ್ಣಾಗಿರಬೇಕು. ಇ–ಸ್ಟ್ಯಾಂಪ್‌ ಹಾಗೂ ಜೆರಾಕ್ಸ್‌ ಅಂಗಡಿಗಳಿಗೆ ಹೋಗಬೇಕಾದರೂ ಪ್ರಯಾಸ ಪಡಬೇಕು. ಹೀಗಾಗಿ ವೃದ್ಧರು ಹಾಗೂ ಮಹಿಳೆಯರು ಪರಿತಪಿಸುವಂತಾಗಿದೆ. ಪುಟ್ಟ ಮಕ್ಕಳನ್ನು ಕಂಗಳ‌ಲ್ಲಿ ಹೊತ್ತು ಬರುವ ಮಹಿಳೆಯರು ರಸ್ತೆ ದಾಟುವ ಧಾವಂತದಲ್ಲಿ ಅಪಘಾತಕ್ಕೊಳಗಾಗುವ ಅಪಾಯವೂ ಇದೆ.

ವಾಹನ ನಿಲುಗಡೆಯದ್ದೆ ದೊಡ್ಡ ಸಮಸ್ಯೆ: ವಿವಿಧ ಕೆಲಸಗಳಿಗಾಗಿ ನಿತ್ಯವೂ ನೂರಾರು ಮಂದಿ ಈ ಕಚೇರಿಗಳಿಗೆ ನೀಡುತ್ತಿರುತ್ತಾರೆ. ದ್ವಿಚಕ್ರ ವಾಹನ ಹಾಗೂ ಕಾರುಗಳ ಮೂಲಕ ಕಚೇರಿ ತಲುಪುವವರು ಅವುಗಳ ನಿಲುಗಡೆಗೆ ಸೂಕ್ತ ಸ್ಥಳವಿಲ್ಲದೆ ಒದ್ದಾಡುವಂತಾಗಿದೆ

ಕೆಲವರು ದೂರದಲ್ಲೆಲ್ಲೊ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಅಲ್ಲಿಂದ ನಡೆದುಕೊಂಡೇ ಕಚೇರಿಗೆ ಬರುವುದುಂಟು. ಇನ್ನೂ ಕೆಲವರು ಗೊತ್ತಿಲ್ಲದೆಯೇ ‘ನೋ ಪಾರ್ಕಿಂಗ್‌’ ಜಾಗದಲ್ಲಿ ವಾಹನ ನಿಲ್ಲಿಸಿಬಿಡುತ್ತಾರೆ. ಆ ವಾಹನಗಳನ್ನು ಸಂಚಾರ ಪೊಲೀಸರು ‘ಟೋಯಿಂಗ್‌’ ಮಾಡಿಬಿಡುತ್ತಾರೆ. ಅದನ್ನು ಬಿಡಿಸಿಕೊಂಡು ಬರಲು ಅವರು ಸಂಚಾರ ಪೊಲೀಸ್‌ ಠಾಣೆಗೆ ಹೋಗಬೇಕು. ಅಲ್ಲಿ ₹200 ಅಥವಾ ₹500 ದಂಡವನ್ನೂ ಕಟ್ಟಬೇಕು.

‘ಕೆಲಸಕ್ಕೆ ರಜೆ ಹಾಕಿ ಬಂದಿದ್ದೇನೆ. ಇಲ್ಲಿ ಬೈಕ್‌ ನಿಲ್ಲಿಸಲೂ ಜಾಗವಿಲ್ಲ. ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿ ಬಂದರೆ ಸಂಚಾರ ಪೊಲೀಸರು ಟೋಯಿಂಗ್ ಮಾಡುತ್ತಾರೆ. ಅವರು ವಾಹನ ಹೊತ್ತೊಯ್ದರೆ ಅದನ್ನು ಬಿಡಿಸಿಕೊಂಡು ಬರಲು ಠಾಣೆಗೆ ಹೋಗಬೇಕು. ಇದು ನನ್ನೊಬ್ಬನ ಸಮಸ್ಯೆಯಲ್ಲ. ಕಚೇರಿಗೆ ನಿತ್ಯ ಬರುವ ನೂರಾರು ಮಂದಿ ಇದೇ ಗೋಳು ಅನುಭವಿಸುವಂತಾಗಿದೆ’ ಎಂದು ಜಯನಗರದ ಕಚೇರಿಗೆ ಬಂದಿದ್ದ ವಾಸುದೇವ್‌ ಬೇಸರ ವ್ಯಕ್ತಪಡಿಸಿದರು.

ಲಿಫ್ಟ್‌ ಇಲ್ಲದೆ ತೊಂದರೆ: ‘ಉಪ ನೋಂದಣಾಧಿಕಾರಿಗಳ ಕಚೇರಿಗಳಿರುವ ಬಹುಪಾಲು ಕಟ್ಟಡಗಳಲ್ಲಿ ‘ಲಿಫ್ಟ್‌’ ವ್ಯವಸ್ಥೆಯೇ ಇಲ್ಲ. ಇದರಿಂದ ಅಂಗವಿಕಲರಿಗೆ ಹೆಚ್ಚು ತೊಂದರೆಯಾಗುತ್ತಿದೆ. ವೃದ್ಧರು, ಚಿಕ್ಕ ಮಕ್ಕಳೊಂದಿಗೆ ಬರುವ ಮಹಿಳೆಯರು ಮೆಟ್ಟಿಲುಗಳನ್ನು ಹತ್ತಿಕೊಂಡೇ ಎರಡು ಅಥವಾ ಮೂರನೇ ಮಹಡಿಯಲ್ಲಿರುವ ಕಚೇರಿಗಳನ್ನು ತಲುಪಬೇಕು’ ಎಂದು ಕೋಣನಕುಂಟೆ ನಿವಾಸಿ ಸಲೀಂ ಹೇಳಿದರು.

‘ನೆಲ ಮಹಡಿಯಿಂದ ಮೊದಲನೇ ಮಹಡಿಗೆ ತಲುಪುವಷ್ಟರಲ್ಲೇ ಕೆಲವರು ದಣಿದುಬಿಡುತ್ತಾರೆ. ಬಳಿಕ ಮೆಟ್ಟಿಲ ಮೇಲೆ ಕುಳಿತು ದಣಿವಾರಿಸಿಕೊಂಡು ನಂತರ ಮತ್ತೊಂದು ಮಹಡಿಯತ್ತ ಹೆಜ್ಜೆ ಹಾಕುವ ದೃಶ್ಯ ಕೆಲ ಕಚೇರಿಗಳಲ್ಲಿ ಕಾಣಸಿಗುತ್ತದೆ’ ಎಂದರು.

‘ಸಿಎ ನಿವೇಶನ ಗುರುತಿಸಲು ಸೂಚಿಸಲಾಗಿದೆ’

‘ಬೆಂಗಳೂರಿನ ಬಹುಪಾಲು ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲೇ ನಡೆಯುತ್ತಿವೆ. ತಮ್ಮ ವ್ಯಾಪ್ತಿಯಲ್ಲಿ ಸಿಎ ನಿವೇಶನ ಇದ್ದರೆ ಗುರುತಿಸಿ ಆ ಬಗ್ಗೆ ಮಾಹಿತಿ ನೀಡುವಂತೆ ಎಲ್ಲ ಉಪ ನೋಂದಣಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ನೋಂದಣಿ ಮಹಾ ‍ಪರಿವೀಕ್ಷಕ ಮತ್ತು ಆಯುಕ್ತ ಪಿ.ಎನ್‌.ರವೀಂದ್ರ ‘ಪ್ರಜಾವಾಣಿ’ಗೆ ಹೇಳಿದರು.

‘ಕಚೇರಿಯ ಕಟ್ಟಡಗಳು ಸಾಧ್ಯವಾದಷ್ಟು ನೆಲ ಮಹಡಿಯಲ್ಲೇ ಇರುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ. ವಿಶಾಲವಾದ ಹಾಗೂ ಮೂಲ ಸೌಕರ್ಯವನ್ನೊಳಗೊಂಡ ಕಟ್ಟಡಗಳು ದೊರೆತರೆ ಆ ಬಗ್ಗೆ ಮಾಹಿತಿ ನೀಡುವಂತೆಯೂ ತಿಳಿಸಲಾಗಿದೆ. ಅಂತಹ ಕಟ್ಟಡಗಳು ಸಿಕ್ಕರೆ ಸರ್ಕಾರದ ಅನುಮೋದನೆ ಪಡೆದು ಅಲ್ಲಿಗೆ ಕಚೇರಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

‘ಕೆಲ ಪ್ರದೇಶಗಳಲ್ಲಿ ಹಳೆಯ ಕಟ್ಟಡಗಳಲ್ಲೇ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಆ ಭಾಗಗಳಲ್ಲಿ ವಿಶಾಲವಾದ ಕಟ್ಟಡಗಳು ಸಿಗದಿರುವುದರಿಂದ ಅವುಗಳನ್ನು ಬೇರೆಡೆ ಸ್ಥಳಾಂತರಿಸುವುದು ಅಸಾಧ್ಯವಾಗಿದೆ. ನಗರದಲ್ಲಿ ಸಿಎ ನಿವೇಶನಗಳು ಸಿಗುವುದೂ ಕಷ್ಟ. ಹೀಗಾಗಿ ಸ್ವಂತ ಕಟ್ಟಡ ಹೊಂದುವ ಕನಸಿಗೆ ಹಿನ್ನಡೆಯಾಗುತ್ತಿದೆ’ ಎಂದು ಹೇಳಿದರು.

‘ಮೂಲ ಸೌಕರ್ಯಕ್ಕೆ ಒತ್ತು ನೀಡಲಿ’

‘ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ದೊಡ್ಡ ಮೊತ್ತದ ವ್ಯವಹಾರಗಳು ನಡೆಯುತ್ತವೆ. ಆಸ್ತಿ ಮಾರಲು, ಆಸ್ತಿ ಕೊಳ್ಳಲು, ವಿವಾಹ ನೋಂದಣಿ ಹೀಗೆ ಹಲವು ಕೆಲಸಗಳಿಗಾಗಿ ನಿತ್ಯ ನೂರಾರು ಮಂದಿ ಕಚೇರಿಗಳಿಗೆ ಭೇಟಿ ನೀಡುತ್ತಿರುತ್ತಾರೆ. ಹಾಗೆ ಬಂದವರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಅದು ಸರ್ಕಾರ ಹಾಗೂ ಅಧಿಕಾರಿಗಳ ಜವಾಬ್ದಾರಿ’ ಎಂದು ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌ (ಸಿ4ಸಿ) ಸಂಘಟನೆಯ ಸಂಸ್ಥಾಪಕ ರಾಜ್‌ಕುಮಾರ್‌ ದುಗಾರ್ ಹೇಳಿದರು.

‘ಆನ್‌ಲೈನ್‌ ಸೇವೆ ಇದ್ದರೂ ಸಾಕಷ್ಟು ಮಂದಿ ಕಚೇರಿಗಳಿಗೆ ಹೋಗುತ್ತಾರೆ. ವ್ಯವಹಾರ ಮಾಡಲು ಬರುವವರಿಗೆ ಯಾವ ತೊಂದರೆಯೂ ಆಗಬಾರದು. ಈಗ ಓ ಮೈಕ್ರಾನ್‌ ತಳಿಯ ವೈರಾಣು ಹರಡುವ ಭೀತಿ ಎದುರಾಗಿದೆ. ಇಂತಹ ಸಮಯದಲ್ಲಿ ಅಂತರ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ಅದಕ್ಕೆ ಅಗತ್ಯವಿರುವ ವ್ಯವಸ್ಥೆ ಮಾಡಬೇಕು’ ಎಂದರು.

‘ಅಧಿಕಾರಿಗಳಿಗೇ ಮನಸ್ಸಿಲ್ಲ’

‘ನಗರದಲ್ಲಿ ಹಲವು ಬಿಡಿಎ ಸಂಕೀರ್ಣಗಳು, ಬಿಬಿಎಂಪಿ ಕಟ್ಟಡಗಳು ಖಾಲಿ ಇವೆ. ಅಲ್ಲಿ ಎಲ್ಲ ಸೌಕರ್ಯಗಳೂ ಇವೆ. ಸಿಎ ನಿವೇಶನಗಳೂ (ನಾಗರಿಕ ಸೌಲಭ್ಯಕ್ಕೆ ಮೀಸಲಿಟ್ಟ ಜಾಗ) ಇವೆ. ಆ ಜಾಗಗಳನ್ನು ಖರೀದಿಸಿ ಸ್ವಂತ ಕಟ್ಟಡ ನಿರ್ಮಿಸಬಹುದು’ ಎಂದು ಆಮ್‌ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್‌ ದಾಸರಿ ತಿಳಿಸಿದರು.

‘ದೊಮ್ಮಲೂರಿನ ಬಿಡಿಎ ಸಂಕೀರ್ಣದಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿ ಎದುರು ವಾಹನ ನಿಲುಗಡೆಗೂ ಸ್ಥಳ ಇಲ್ಲ. ಕಚೇರಿಯೊಳಗೆ ಜನ ಒತ್ತೊತ್ತಾಗಿ ನಿಂತಿರುತ್ತಾರೆ. ವಯಸ್ಸಾದವರಿಗೆ ಕೂರಲು ಆಸನದ ವ್ಯವಸ್ಥೆಯೂ ಇಲ್ಲ. ಹೀಗಾಗಿ ದಿನವಿಡೀ ನಿಂತುಕೊಂಡೇ ಇರಬೇಕಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.