ಬೆಂಗಳೂರು: ‘ಮಲ್ಲಿಕಾರ್ಜುನ ಖರ್ಗೆ ಅವರದ್ದು ಪುತ್ರ ವ್ಯಾಮೋಹವೆಂದು ಹೇಳಿದ್ದ ಉಮೇಶ ಜಾಧವ ಅವರು ಈಗ ಮಾಡಿದ್ದೇನು. ತಮ್ಮ ಪುತ್ರನಿಗೆ ಬಿಜೆಪಿ ಟಿಕೆಟ್ ಕೊಡಿಸಿಲ್ಲವೇ’ ಎಂದು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಪ್ರಶ್ನಿಸಿದರು.
‘ಉಮೇಶ ಜಾಧವ ದ್ವಂದ್ವ ನೀತಿ ಅನುಸರಿಸುತ್ತಲೇ ಬಂದಿದ್ದಾರೆ. ನಿಜವಾದ ಪುತ್ರ ವ್ಯಾಮೋಹ ಅವರದ್ದು. ಉಪ ಚುನಾವಣೆಯಲ್ಲಿ ಜನರು ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಸುಭಾಷ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಭಾನುವಾರ ‘ಬಿ’ ಫಾರಂ ನೀಡಿದರು. ಸಚಿವ ಪ್ರಿಯಾಂಕ ಖರ್ಗೆ ಇದ್ದರು.
ಅಸಮಾಧಾನ– ಬೇಸರ: ಸುಭಾಷ್ ರಾಠೋಡ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದಕ್ಕೆ ಇನ್ನೊಬ್ಬ ಆಕಾಂಕ್ಷಿಯಾಗಿದ್ದ ಬಾಬು ಹೊನ್ನಾನಾಯಕ ಪರೋಕ್ಷವಾಗಿ ಅಸಮಾಧಾನ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ.
‘ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಖರ್ಗೆ ಅವರ ನಿಷ್ಠಾವಂತ ಬೆಂಬಲಿಗ. ನಾನು ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಹೈಕಮಾಂಡ್ ಮೊದಲೇ ಗಮನಹರಿಸಬೇಕಿತ್ತು. ಆದರೆ, ಟಿಕೆಟ್ ನೀಡಿದ ಮೇಲೆ ಇನ್ನೇನಿದೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.