ADVERTISEMENT

‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ’ ಕರಡು ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 19:41 IST
Last Updated 8 ಜುಲೈ 2024, 19:41 IST
   

ಬೆಂಗಳೂರು: ಬೆಂಗಳೂರು ನಗರಕ್ಕೆ ಹೊಸ ಆಡಳಿತ ವ್ಯವಸ್ಥೆ ಕಲ್ಪಿಸುವ ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ– 2024’ರ ಕರಡು ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

ಬಿಬಿಎಂಪಿ ಸುಧಾರಣಾ ಸಮಿತಿಯ (ಬ್ರ್ಯಾಂಡ್‌ ಬೆಂಗಳೂರು ಸಮಿತಿ) ಅಧ್ಯಕ್ಷ ಬಿ.ಎಸ್‌. ಪಾಟೀಲ, ಸದಸ್ಯರಾದ ವಿ. ರವಿಚಂದರ್‌ ಹಾಗೂ ಸಿದ್ದಯ್ಯ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಸೋಮವಾರ ಮಸೂದೆಯ ಕರಡನ್ನು ಸಲ್ಲಿಸಿದರು.

‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ–2024’ರಲ್ಲಿ ಮೂರು ಹಂತದ ಆಡಳಿತ ವ್ಯವಸ್ಥೆಯನ್ನು ಕಲ್ಪಿಸುವ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ (ಜಿಬಿಎ) ರಚನೆಯ ಪ್ರಸ್ತಾವವಿದೆ. ಪ್ರಾಧಿಕಾರ, ಪಾಲಿಕೆ ಹಾಗೂ ವಾರ್ಡ್‌ಗಳೆಂಬ ಮೂರು ಹಂತದಲ್ಲಿ ಆಡಳಿತ ವ್ಯವಸ್ಥೆ ಇರಲಿದೆ.  ಒಂದರಿಂದ 10 ಪಾಲಿಕೆಗಳು ಹಾಗೂ ವಾರ್ಡ್‌ಗಳನ್ನು 400ರವರೆಗೆ ರಚಿಸಬಹುದು. 708 ಚದರ ಕಿಲೋ ಮೀಟರ್‌ ವ್ಯಾಪ್ತಿಯ ಬಿಬಿಎಂಪಿಯನ್ನು ಗ್ರೇಟರ್‌ ಬೆಂಗಳೂರಾಗಿ ಮಾರ್ಪಡಿಸಿ, ಅದರ ವ್ಯಾಪ್ತಿಯನ್ನು ಸುಮಾರು 950 ಚದರ ಕಿಲೋಮೀಟರ್‌ವರೆಗೆ ವಿಸ್ತರಿಸುವುದು ಸರ್ಕಾರದ ವಿವೇಚನೆಗೆ ಒಳಪಟ್ಟಿದೆ. ಬೆಂಗಳೂರಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳೂ ಜಿಬಿಎ ವ್ಯಾಪ್ತಿಗೆ ಬರಲಿವೆ.

ADVERTISEMENT

‘ಬೆಂಗಳೂರು ನಗರಕ್ಕೆ ಮೂರು ಹಂತದ ಆಡಳಿತ ವ್ಯವಸ್ಥೆಯ ಅಗತ್ಯವಿದ್ದು, ಈ ಕುರಿತು ಸಾಕಷ್ಟು ಅಧ್ಯಯನಗಳೊಂದಿಗೆ ಮಸೂದೆಯ ಕರಡು ರೂಪಿಸಲಾಗಿದೆ. ಈ ಆಡಳಿತ ವ್ಯವಸ್ಥೆಗೆ ಕಾಯ್ದೆಯಾಗಬೇಕಿದ್ದು, ಅದನ್ನು ಮಸೂದೆ ರೂಪದಲ್ಲಿ ಉಪ ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗಿದೆ’ ಎಂದು ವಿ. ರವಿಚಂದರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಧಿವೇಶನದಲ್ಲಿ ಮಂಡನೆ: ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ–2024’ ಅನ್ನು ಅಧಿವೇಶನದಲ್ಲಿ ಮಂಡಿಸುವ ರೀತಿಯಲ್ಲೇ ಸಿದ್ಧಪಡಿಸಲಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ ಅನುಮೋದಿಸಿ, ಜುಲೈ 15ರಿಂದ ಆರಂಭವಾಗುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.