ADVERTISEMENT

ಉಪನಗರ ರೈಲು | 26 ತಿಂಗಳಲ್ಲಿ ಕಾರಿಡಾರ್‌–2 ಪೂರ್ಣ: ಎಂ.ಬಿ. ಪಾಟೀಲ ವಿಶ್ವಾಸ

ಕಾಮಗಾರಿ ಪ್ರಗತಿ ವೀಕ್ಷಿಸಿದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2023, 15:21 IST
Last Updated 11 ಆಗಸ್ಟ್ 2023, 15:21 IST
ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್‌– 2 ನಿರ್ಮಾಣ ಕಾಮಗಾರಿ ವಿವರಗಳನ್ನು ಸಚಿವ ಎಂ.ಬಿ. ಪಾಟೀಲ ಅವರಿಗೆ ಕೆ–ರೈಡ್ ಸಂಸ್ಥೆಯ ಸಿಬ್ಬಂದಿ ವಿವರಿಸಿದರು. ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ , ಇಂಧನ ಸಚಿವ ಕೆ.ಜೆ. ಜಾರ್ಜ್ ಇದ್ದರು.
ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್‌– 2 ನಿರ್ಮಾಣ ಕಾಮಗಾರಿ ವಿವರಗಳನ್ನು ಸಚಿವ ಎಂ.ಬಿ. ಪಾಟೀಲ ಅವರಿಗೆ ಕೆ–ರೈಡ್ ಸಂಸ್ಥೆಯ ಸಿಬ್ಬಂದಿ ವಿವರಿಸಿದರು. ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ , ಇಂಧನ ಸಚಿವ ಕೆ.ಜೆ. ಜಾರ್ಜ್ ಇದ್ದರು.    –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಮಹತ್ವಾಕಾಂಕ್ಷಿ ಬೆಂಗಳೂರು ಉಪನಗರ ರೈಲ್ವೆ ಯೋಜನೆಯಲ್ಲಿ ಚಿಕ್ಕಬಾಣಾವರ ಮತ್ತು ಬೆನ್ನಿಗಾನಹಳ್ಳಿ ನಡುವಿನ ಕಾರಿಡಾರ್-2 ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಈಗಾಗಲೇ ಶೇ 15ರಷ್ಟು ಕಾಮಗಾರಿ ಮುಗಿದಿದ್ದು, 26 ತಿಂಗಳಲ್ಲಿ ಪೂರ್ಣಗೊಂಡು ರೈಲು ಸಂಚರಿಸಲಿದೆ’ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಲಿಂಗರಾಜಪುರ, ಶಾಂಪುರ, ಹೆಬ್ಬಾಳ, ಯಶವಂತಪುರಗಳಲ್ಲಿ ಶುಕ್ರವಾರ ಕಾರಿಡಾರ್-2ಗೆ ಸಂಬಂಧಿಸಿದ ಕಾಮಗಾರಿಗಳನ್ನು ಶುಕ್ರವಾರ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಎಲ್ಲ ನಾಲ್ಕು ಕಾರಿಡಾರ್‌ಗಳನ್ನು 2026ಕ್ಕೆ ಪೂರ್ಣಗೊಳಿಸುವುದಾಗಿ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (ಕೆ–ರೈಡ್‌) ಅಧಿಕಾರಿಗಳು ತಿಳಿಸಿದ್ದಾರೆ. 2028ರ ಒಳಗೆ ಮುಗಿಯುವುದು ಖಚಿತ. ಉಪನಗರ ರೈಲು ಯೋಜನೆ ಪೂರ್ಣಗೊಂಡರೆ ವಾಹನದಟ್ಟಣೆ ಬಹಳಷ್ಟು ಕಡಿಮೆಯಾಗಲಿದೆ ಎಂದು ತಿಳಿಸಿದರು.

ADVERTISEMENT

ಕಾರಿಡಾರ್ -2 ಯೋಜನೆಗೆ 157 ಎಕರೆ ಜಮೀನನ್ನು ನೈರುತ್ಯ ರೈಲ್ವೆ ಹಸ್ತಾಂತರಿಸಿದೆ. ಇದಲ್ಲದೇ 5.11 ಎಕರೆ ಖಾಸಗಿ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. 7.73 ಎಕರೆ ಸರ್ಕಾರಿ ಭೂಮಿಯಲ್ಲಿ 2.72 ಎಕರೆ ಸ್ವಾಧೀನವಾಗಿದೆ ಎಂದು ವಿವರಿಸಿದರು.

ಮುಂದಿನ 10 ತಿಂಗಳಲ್ಲಿ ನೆಲಮಟ್ಟದ ಕಾಮಗಾರಿಗಳು ಪೂರ್ಣವಾಗಲಿವೆ. ಶಾಂಪುರದಲ್ಲಿ ಪ್ರಗತಿಯಲ್ಲಿರುವ ರೈಲ್ವೆ ಕೆಳಸೇತುವೆ ಕಾಮಗಾರಿ 10 ತಿಂಗಳಲ್ಲಿ ಮುಗಿಯಲಿದೆ. ಈ ಮಾರ್ಗದಲ್ಲಿ 12 ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. 2025ರ ಅಕ್ಟೋಬರ್‌ ವೇಳೆಗೆ ಮೊದಲ 10 ರೈಲು ಸಂಚಾರ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

ಕೆಂಗೇರಿ- ವೈಟ್‌ಫೀಲ್ಡ್‌ ನಡುವಿನ ಕಾರಿಡಾರ್‌–4ರ ಕಾಮಗಾರಿಗಳು ಎರಡನೇ ಆದ್ಯತೆಯಾಗಿ ಶುರುವಾಗಲಿವೆ. ಸಿವಿಲ್ ಕಾಮಗಾರಿಗಳಿಗೆ ಟೆಂಡರ್ ಮುಗಿದಿದ್ದು, ಸದ್ಯದಲ್ಲೇ ಕಾಮಗಾರಿಗಳನ್ನು ಬಿಡ್‌ದಾರರಿಗೆ ವಹಿಸಲಾಗುವುದು. ಕೆಎಸ್‌ಆರ್‌ ಬೆಂಗಳೂರು–ದೇವನಹಳ್ಳಿ ಸಂಪರ್ಕಿಸುವ ಕಾರಿಡಾರ್‌–1 ಬಳಿಕ ಆರಂಭಗೊಳ್ಳಲಿದೆ. ಕೊನೆಯ ಹಂತವಾಗಿ ಹೀಳಲಿಗೆ- ರಾಜಾನುಕುಂಟೆ ಕಾರಿಡಾರ್‌–3 ಆರಂಭವಾಗಲಿದೆ ಎಂದರು.

₹1,000 ಕೋಟಿ ಮೀಸಲು: ಉಪನಗರ ರೈಲು ಯೋಜನೆಯ ಅಂದಾಜು ವೆಚ್ಚ ₹ 15,767 ಕೋಟಿ.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತುತ ಹಣಕಾಸು ವರ್ಷದಲ್ಲಿ ₹ 1,000 ಕೋಟಿ  ಒದಗಿಸಿದ್ದಾರೆ. ಜರ್ಮನಿಯ ಕೆಎಫ್‌ಡಬ್ಲ್ಯು, ಯೂರೋಪಿಯನ್‌ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ ಮತ್ತು ಲಕ್ಸಂಬರ್ಗ್‌ನಿಂದ  ₹ 7,438 ಕೋಟಿ ಸಾಲ ಪಡೆಯಲಾಗುವುದು ಎಂದು ತಿಳಿಸಿದರು.

ವಿವಿಧೆಡೆ ಭೇಟಿ: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಲಿಂಗರಾಜಪುರದಲ್ಲಿ  ತಡೆಗೋಡೆ ಕಾಮಗಾರಿಯನ್ನು ವೀಕ್ಷಿಸಿದರು. ಬಳಿಕ ಶಾಂಪುರದಲ್ಲಿ ನಿರ್ಮಿಸುತ್ತಿರುವ ರೈಲ್ವೆ ಮೇಲ್ಸೇತುವೆ ಪರಿವೀಕ್ಷಣೆ ನಡೆಸಿದರು. ಅಲ್ಲಿ ಸ್ಥಳೀಯ ಶಾಸಕರಾಗಿರುವ ಇಂಧನ ಸಚಿವ ಕೆ.ಜೆ. ಜಾರ್ಜ್‌ ಜೊತೆಗಿದ್ದರು. ಹೆಬ್ಬಾಳದಲ್ಲಿ ನಿರ್ಮಾಣವಾಗಲಿರುವ ನಿಲ್ದಾಣದ ಉದ್ದೇಶಿತ ಸ್ಥಳದ ಮಾಹಿತಿ ಪಡೆದ ಬಳಿಕ ಯಶವಂತಪುರದ ಬ್ಯಾಚಿಂಗ್ ಪ್ಲಾಂಟ್‌ ಮತ್ತು ಲ್ಯಾಬೊರೇಟರಿಗಳಿಗೆ ಭೇಟಿ ನೀಡಿದಾಗ ಸ್ಥಳೀಯ ಶಾಸಕ ಮುನಿರತ್ನ ಸಾಥ್ ನೀಡಿದರು. 

ಯಶವಂತಪುರ ಪ್ಲಾಂಟ್‌ನಲ್ಲಿ ಅವರು ಕಾಂಕ್ರೀಟ್‌ ಉತ್ಪಾದನೆಗೆ ಚಾಲನೆ ನೀಡಿದರು.

ಲಿಂಗರಾಜಪುರದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್‌– 2 ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ. 
‘ಸುತ್ತಲಿನ ನಗರಗಳಿಗೆ ವಿಸ್ತರಣೆಯ ಗುರಿ’
ಉಪನಗರ ರೈಲು ಸಂಪರ್ಕವನ್ನು ಚಿಕ್ಕಬಳ್ಳಾಪುರ ಮೈಸೂರು ಮಾಗಡಿ ತುಮಕೂರು ಗೌರಿಬಿದನೂರು ಕೋಲಾರ ಮತ್ತು ಹೊಸೂರುಗಳಿಗೆ ವಿಸ್ತರಿಸುವ ಉದ್ದೇಶವಿದೆ. ಇದರ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ಯೋಜನೆ ಈಗ 148 ಕಿ.ಮೀ. ಆಗಿದೆ. ವಿಸ್ತರಣೆಗೊಂಡರೆ 452 ಕಿ.ಮೀಗೆ ಹಿಗ್ಗಲಿದೆ ಎಂದು ಸಚಿವರು ತಿಳಿಸಿದರು.
‘ಉಪಗುತ್ತಿಗೆಗೆ ಅವಕಾಶವಿಲ್ಲ’
‘ಕಾರಿಡಾರ್‌–2 ಕಾಮಗಾರಿಯನ್ನು ಎಲ್‌ ಆ್ಯಂಡ್‌ ಟಿ ಸಂಸ್ಥೆ ಗುತ್ತಿಗೆ ಪಡೆದಿದೆ. ಈ ಸಂಸ್ಥೆಯವರು ಉಪಗುತ್ತಿಗೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಉಪ ಗುತ್ತಿಗೆ ನೀಡದೇ ಉತ್ತಮ ರೀತಿಯಲ್ಲಿ ಕಾಮಗಾರಿ ನಡೆಸಬೇಕು. ಸಣ್ಣ ಅಡೆತಡೆಗಳನ್ನೇ ನೆಪವಾಗಿಸಿ ತಡಮಾಡಬಾರದು’ ಎಂದು ಶಾಸಕ ಮುನಿರತ್ನ ಸಲಹೆ ನೀಡಿದರು. ಈ ಬಗ್ಗೆ ಸಚಿವ ಎಂ.ಬಿ.ಪಾಟೀಲ ಬಳಿಕ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ ‘ಕಾಮಗಾರಿಗಳನ್ನು ಎಲ್‌ ಆ್ಯಂಡ್‌ ಟಿ ಕಂಪನಿ ಉಪ ಗುತ್ತಿಗೆ ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಉಪಗುತ್ತಿಗೆ ನೀಡಲು ಅವಕಾಶವಿಲ್ಲ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.