ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಕಾರಿಡಾರ್–2ರಲ್ಲಿ ಆರಂಭಿಕ ಹಂತವಾಗಿ ಚಿಕ್ಕಬಾಣಾವರ–ಯಶವಂತಪುರ ನಡುವೆ 2025ರ ಡಿಸೆಂಬರ್ ಒಳಗೆ ರೈಲು ಸಂಚಾರ ಆರಂಭವಾಗಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ದೇವನಹಳ್ಳಿ ಬಳಿಯ ಗೊಲ್ಲಹಳ್ಳಿಯ ಕ್ಯಾಸ್ಟಿಂಗ್ ಕಾರ್ಯಾಗಾರದಲ್ಲಿ ದೇಶದಲ್ಲೇ ಅತಿ ಉದ್ದದ (100 ಅಡಿ ಅಥವಾ 31 ಮೀಟರ್) ಯು-ಗರ್ಡರ್ ನಿರ್ಮಾಣ ಪ್ರಕ್ರಿಯೆಯನ್ನು ಶನಿವಾರ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.
ಕಾರಿಡಾರ್–2 ಚಿಕ್ಕಬಾಣಾವರ–ಬೆನ್ನಿಗಾನಹಳ್ಳಿ ಮಾರ್ಗವು (ಮಲ್ಲಿಗೆ ಮಾರ್ಗ) 25 ಕಿ.ಮೀ. ದೂರವನ್ನು ಹೊಂದಿದೆ. ಅದರಲ್ಲಿ 16.5 ಕಿ.ಮೀ. ನೆಲಮಟ್ಟದಲ್ಲಿ ಇರಲಿದೆ. ಹೆಬ್ಬಾಳದಿಂದ ಯಶವಂತಪುರದವರೆಗೆ 8.5 ಕಿ.ಮೀ.ನಷ್ಟು ಎತ್ತರಿಸಿದ (ಎಲಿವೇಟೆಡ್) ಮಾರ್ಗ ನಿರ್ಮಾಣಗೊಳ್ಳಲಿದೆ. ಚಿಕ್ಕಬಾಣಾವರ–ಯಶವಂತಪುರ ನಡುವಿನ 7.4 ಕಿ.ಮೀ. ಮಾರ್ಗದಲ್ಲಿ ಮೊದಲು ರೈಲು ಸಂಚಾರ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
31 ಮೀಟರ್ ಯು-ಗರ್ಡರ್ ಅನ್ನು ದೇಶದಲ್ಲಿ ಇದೇ ಮೊದಲ ಬಾರಿಗೆ ಬಿಎಸ್‌ಆರ್‌ಪಿಯಲ್ಲಿ ಬಳಸಲಾಗುತ್ತಿದೆ. ಇಂಥ 450 ಯು ಗರ್ಡರ್ ಅಳವಡಿಸಲಾಗುವುದು. ಬೇರೆ ರೈಲ್ವೆ ಯೋಜನೆಗಳಲ್ಲಿ 28 ಮೀಟರ್ ಬಳಸಲಾಗುತ್ತಿತ್ತು ಎಂದು ವಿವರಿಸಿದರು.
ಎಲ್ ಆ್ಯಂಡ್ ಟಿ ಕ್ಯಾಸ್ಟಿಂಗ್ (ನಿರ್ಮಾಣ) ಯಾರ್ಡ್‌ನಲ್ಲಿ ಯು–ಗರ್ಡರ್ ಅಲ್ಲದೇ ಐ-ಗರ್ಡರ್ ಮತ್ತು ಫೈಯರ್ ಕ್ಯಾಪ್‌ಗಳನ್ನು ಕೂಡ ಕ್ಯಾಸ್ಟಿಂಗ್ ಮಾಡಲಾಗುತ್ತದೆ. ಮೇಲಿನ ಮಾರ್ಗದಲ್ಲಿ ಇಂತಹ 323 ಐ-ಗರ್ಡರ್, 283 ಫೈಯರ್ ಕ್ಯಾಪ್ ಗಳನ್ನು ಬಳಸಲಾಗುತ್ತದೆ. ಇದರಿಂದ ವಯಾಡಕ್ಟ್ ಕೂರಿಸಲು ಹಿಡಿಯುವ ಸಮಯ ಕಡಿಮೆಗೊಳ್ಳಲಿದೆ. ಬಾಳಿಕೆಯ ಅವಧಿ ಹೆಚ್ಚುತ್ತದೆ ಹಾಗೂ ಹಣ ಉಳಿತಾಯವೂ ಆಗುತ್ತದೆ ಎಂದು ವಿವರಿಸಿದರು.
ಕಾರಿಡಾರ್ - 2ರಲ್ಲಿ ಉತ್ತಮವಾಗಿ ಕೆಲಸ ನಡೆಯುತ್ತಿದೆ. ನಾಗರಿಕ ಸೇವೆಗಳನ್ನು ಸ್ಥಳಾಂತರಿಸುವ ಬಗ್ಗೆ ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬೆಸ್ಕಾಂ, ಬಿಎಸ್ಎನ್ಎಲ್ ಹಾಗೂ ಇನ್ನಿತರ ಖಾಸಗಿ ಸಂಸ್ಥೆಗಳ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು.
ಜಾಗದ ಸಮಸ್ಯೆ: ಕೆಂಗೇರಿ- ವೈಟ್ ಫೀಲ್ಡ್ ಕಾರಿಡಾರ್‌ನಲ್ಲಿ ಕೆಂಗೇರಿ- ಕಂಟೋನ್ಮೆಂಟ್ ನಡುವೆ ಉಪನಗರ ಯೋಜನೆ ಜಾರಿಗೆ ಯಾವ ಸಮಸ್ಯೆಯೂ ಇಲ್ಲ. ಆದರೆ ಕಂಟೋನ್ಮೆಂಟ್- ವೈಟ್ ಫೀಲ್ಡ್ ನಡುವೆ ಜಾಗದ ಸಮಸ್ಯೆ ಇದ್ದು, ಇಲ್ಲಿ ಎತ್ತರಿಸಿದ ಮಾರ್ಗ ನಿರ್ಮಿಸಬೇಕೆ ಅಥವಾ ಬೇರೆ ಯೋಜನೆ ರೂಪಿಸಬೇಕೇ ಎಂಬ ಬಗ್ಗೆ ರೈಲ್ವೆ ಇಲಾಖೆ ಜತೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಎಂ.ಬಿ. ಪಾಟೀಲ ತಿಳಿಸಿದರು.
ಕೆ- ರೈಡ್ ವ್ಯವಸ್ಥಾಪಕ ನಿರ್ದೇಶಕಿ ಎನ್.ಮಂಜುಳಾ ಉಪಸ್ಥಿತರಿದ್ದರು.
ಅಂಕಿ ಅಂಶ
ಶೇ 20 ಈವರೆಗೆ ಮುಗಿದಿರುವ ಬಿಎಸ್‌ಆರ್‌ಪಿ ಕಾಮಗಾರಿ 119.18 ಎಕರೆ ಕಾರಿಡಾರ್–2ಕ್ಕೆ ಸ್ವಾಧೀನಪಡಿಸಿಕೊಂಡಿರುವ ಜಮೀನು 1.26 ಎಕರೆ ಕಾರಿಡಾರ್–2ಕ್ಕೆ ಸ್ವಾಧೀನವಾಗಬೇಕಿರುವ ಜಮೀನು ₹ 15677 ಕೋಟಿ ಎಲ್ಲ ನಾಲ್ಕು ಕಾರಿಡಾರ್‌ಗಳ ನಿರ್ಮಾಣ ವೆಚ್ಚ 148.17 ಕಿ.ಮೀ. ನಾಲ್ಕು ಕಾರಿಡಾರ್‌ಗಳ ಉದ್ದ
ರೈಲ್ವೆ ಅಭಿಪ್ರಾಯಕ್ಕೆ ಆಕ್ಷೇಪ
ಉಪನಗರ ರೈಲು ಯೋಜನೆಯಂತಹ ದೊಡ್ಡ ಯೋಜನೆಗಳನ್ನು ಕಾರ್ಯಗತಗೊಳಿಸಲು ಬೇಕಾದ ತಾಂತ್ರಿಕ ಪರಿಣತಿ ಕೆ-ರೈಡ್ ಬಳಿ ಇಲ್ಲ ಎಂಬ ರೈಲ್ವೆ ಅಧಿಕಾರಿಗಳ ಅಭಿಪ್ರಾಯದಲ್ಲಿ ಸತ್ಯಾಂಶ ಇಲ್ಲ ಎಂದು ಎಂ.ಬಿ. ಪಾಟೀಲ ಆಕ್ಷೇಪ ವ್ಯಕ್ತಪಡಿಸಿದರು.
‘ಉಪನಗರ ರೈಲು ಯೋಜನೆ ರೈಲ್ವೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಡಿ ನಡೆಯುತ್ತಿದ್ದಾಗ ಕೆಲಸ ಹಿಂದೆ ಬಿದ್ದಿತ್ತು. ಈಗ ಕೆ-ರೈಡ್ ಕೆಲಸವನ್ನು ಚುರುಕುಗೊಳಿಸಿ ಸಮರ್ಥವಾಗಿ ನಿರ್ವಹಿಸುತ್ತಿದೆ. ನಮ್ಮಲ್ಲಿ ತಾಂತ್ರಿಕ ತಜ್ಞರು ಹಾಗೂ ಅನುಭವಿಗಳು ಇದ್ದಾರೆ. ರೈಲ್ವೆ ಅಧಿಕಾರಿಗಳ ಹೇಳಿಕೆ ಯೋಜನೆಯ ವಿಷಯವನ್ನು ರಾಜಕೀಯ ಕಾರಣಗೊಳಿಸುವ ದುರುದ್ದೇಶ ಹೊಂದಿದೆ. ಯಾವುದೇ ಕೆಸರೆರಚಾಟಕ್ಕೆ ರೈಲ್ವೆ ಆಸ್ಪದ ಕೊಡಬಾರದು’ ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.