ಬೆಂಗಳೂರು: ಲೆವೆಲ್ ಕ್ರಾಸಿಂಗ್ (ಎಲ್‌ಸಿ) ತಪ್ಪಿಸಲು ಇಲ್ಲಿವರೆಗೆ ರೈಲು ಹಳಿಯ ಕೆಳಗೆ (ಆರ್‌ಯುಬಿ) ಅಥವಾ ಮೇಲ್ಸೇತುವೆ (ಆರ್‌ಒಬಿ) ನಿರ್ಮಿಸಲಾಗುತ್ತಿತ್ತು. ಈಗ ಈ ಪದ್ಧತಿಯನ್ನು ಬಿಟ್ಟು ಹಳಿಯನ್ನೇ ಎತ್ತರಿಸುವ ಯೋಜನೆಯನ್ನು ನಗರದ 10 ಲೆವೆಲ್ ಕ್ರಾಸಿಂಗ್‌ಗಳಲ್ಲಿ ಜಾರಿಗೆ ತರಲಾಗುತ್ತಿದೆ. ರಾಜ್ಯದಲ್ಲಿಯೇ ಮೊದಲ ಯೋಜನೆ ಇದಾಗಿದೆ.
ಆರ್‌ಒಬಿ, ಆರ್‌ಯುಬಿಗಳಿಗೆ ಭೂ ಸ್ವಾಧೀನ ಮಾಡಲು ಕಷ್ಟ ಇರುವ ನಗರಗಳಲ್ಲಿ ಈ ಯೋಜನೆ ಹೆಚ್ಚು ಉಪಯೋಗವಾಗಲಿದೆ ಎಂದು ಕೆ–ರೈಡ್ ಅಧಿಕಾರಿಗಳು ತಿಳಿಸಿದ್ದಾರೆ
ಬೆಂಗಳೂರು ನಗರ ವ್ಯಾಪ್ತಿಯಲ್ಲಿ 26 ಲೆವೆಲ್ ಕ್ರಾಸಿಂಗ್‌ಗಳಿವೆ. ಮಾರತ್‌ಹಳ್ಳಿ ರಸ್ತೆ ಸೇರಿದಂತೆ ಹಲವೆಡೆ ವಾಹನ ದಟ್ಟಣೆ ಉಂಟಾಗಲು ಈ ಲೆವೆಲ್ ಕ್ರಾಸಿಂಗ್‌ಗಳ ಪಾತ್ರವೂ ಇದೆ. ರೈಲು ಬರುವ ವೇಳೆಗೆ ಗೇಟ್ ಹಾಕುವುದರಿಂದ ವಾಹನಗಳು ಸಾಲುಗಟ್ಟಿ ಮುಖ್ಯರಸ್ತೆವರೆಗೂ ನಿಲ್ಲುವುದು, ಕ್ರಾಸಿಂಗ್ ದಾಟಿ ರೈಲು ಹೋದ ಬಳಿಕ ಒಮ್ಮೆಲೇ ವಾಹನಗಳು ನುಗ್ಗುವುದು ದಟ್ಟಣೆಯನ್ನು ಹೆಚ್ಚಿಸಿವೆ.
ಬೆಂಗಳೂರು ಉಪನಗರ ರೈಲ್ವೆ ಯೋಜನೆಯಲ್ಲಿ (ಬಿಎಸ್‌ಆರ್‌ಪಿ) ನಾಲ್ಕು ಕಾರಿಡಾರ್‌ಗಳಿವೆ. ಒಟ್ಟು 149 ಕಿಲೋಮೀಟರ್ ಉದ್ದದ ಈ ಯೋಜನೆಯನ್ನು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆ–ರೈಡ್) ಜಾರಿಗೆ ತರುತ್ತಿದೆ. ಅದರಲ್ಲಿ ಈಗಾಗಲೇ ಬೈಯಪ್ಪನಹಳ್ಳಿ–ಚಿಕ್ಕಬಾಣಾವರ ನಡುವೆ (ಕಾರಿಡಾರ್–2) ಕಾಮಗಾರಿ ಚಾಲ್ತಿಯಲ್ಲಿದೆ. ಈ ಕಾರಿಡಾರ್‌ನಲ್ಲಿ ಪ್ರಮುಖ ಏಳು ಲೆವೆಲ್ ಕ್ರಾಸಿಂಗ್ ತೆರವಿಗೆ ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ಹೆಬ್ಬಾಳ–ಬಾಣಸವಾಡಿ ನಡುವೆ 6 ಕಿಲೋಮೀಟರ್‌ನಷ್ಟು ರೈಲ್ವೆ ಹಳಿಯನ್ನು 10 ಅಡಿಯಷ್ಟು ಎತ್ತರಿಸಲಾಗುವುದು ಎಂದು ಕೆ–ರೈಡ್ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.
ಕಾರಿಡಾರ್–1ರಲ್ಲಿ(ಬೆಂಗಳೂರು ನಗರ–ದೇವನಹಳ್ಳಿ) 3 ಲೆವೆಲ್ ಕ್ರಾಸಿಂಗ್‌ಗಳನ್ನು ತೆರವು ಮಾಡಲು ಇದೇ ಮಾದರಿಯಲ್ಲಿ ಹಳಿ ಎತ್ತರಿಸಲಾಗುವುದು. ಪ್ರಮುಖವಾದ 10 ಎಲ್‌ಸಿಗಳನ್ನು ಗುರುತಿಸಿದ್ದರೂ, ಅವುಗಳಲ್ಲದೇ ಇದೇ ಮಾರ್ಗಗಳಲ್ಲಿ ಸಣ್ಣ ಸಣ್ಣ ರಸ್ತೆಗಳ ಕ್ರಾಸಿಂಗ್ ಕೂಡ ಇವೆ. ಹಳಿ ಎತ್ತರಿಸುವುದರಿಂದ ಎಲ್ಲದಕ್ಕೂ ಪರಿಹಾರ ಸಿಗಲಿದೆ. ನಗರ ವ್ಯಾಪ್ತಿಯ ಎಲ್ಲ ಲೆವೆಲ್ ಕ್ರಾಸಿಂಗ್‌ಗಳು ಬಿಎಸ್‌ಆರ್‌ಪಿ ಸಾಗುವ ಹಾದಿಯಲ್ಲೇ ಬರುವುದರಿಂದ ನಾಲ್ಕು ಕಾರಿಡಾರ್‌ಗಳ ಕಾಮಗಾರಿಗಳು ಸಂಪೂರ್ಣಗೊಂಡಾಗ ಬೆಂಗಳೂರು ’ಲೆವೆಲ್ ಕ್ರಾಸಿಂಗ್ ರಹಿತ’ ನಗರವಾಗಿ ಗುರುತಿಸಿಕೊಳ್ಳಲಿದೆ.
ರೈಲು ಸಂಚಾರಕ್ಕೆ ತೊಡಕಾಗಲ್ಲ: ಕಾರಿಡಾರ್‌ಗಳು ಈಗಾಗಲೇ ಇರುವ ರೈಲು ಹಳಿಯ ಪಕ್ಕದಲ್ಲೇ ನಿರ್ಮಾಣಗೊಳ್ಳುತ್ತವೆ. ಮೊದಲು ಬಿಎಸ್‌ಆರ್‌ಪಿ ಹಳಿಗಳನ್ನು ಎತ್ತರಿಸಿ ಅಳವಡಿಸಲಾಗುತ್ತದೆ. ರೈಲು ಸಂಚಾರವನ್ನು ಈ ಹಳಿಗಳಿಗೆ ಬದಲಾಯಿಸಿದ ಬಳಿಕ ಈಗಿರುವ ಹಳಿಗಳನ್ನು ಎತ್ತರಿಸಲಾಗುತ್ತದೆ. ನಾಲ್ಕು ಪಥಗಳು ನಿರ್ಮಾಣಗೊಂಡ ಬಳಿಕವಷ್ಟೇ ಬಿಎಸ್‌ಆರ್‌ಪಿ ರೈಲು ಸಂಚಾರ ಆರಂಭಗೊಳ್ಳಲಿದೆ. ಹಾಗಾಗಿ ಹಳಿಗಳನ್ನು ಎತ್ತರಿಸುವ ಕಾಮಗಾರಿ ನಡೆಯುವ ಸಮಯದಲ್ಲಿ ರೈಲು ಸಂಚಾರಕ್ಕೆ ಯಾವುದೇ ತೊಡಕಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಎಲ್ಲ ಎಲ್‌ಸಿಗಳನ್ನು ತೆರವು ಮಾಡಬೇಕು ಎಂಬುದು ರೈಲ್ವೆ ಇಲಾಖೆಯ ಉದ್ದೇಶ. ಹಂತ ಹಂತವಾಗಿ ಜಾರಿ ಮಾಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಶೀಘ್ರ ಈ ಕೆಲಸವಾಗಲಿದೆ.
–ಕುಸುಮಾ ಹರಿಪ್ರಸಾದ್ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಹೆಚ್ಚುವರಿ ವ್ಯವಸ್ಥಾಪಕಿ (ಆಡಳಿತ)
ಅವಶ್ಯಕತೆ ಸೃಷ್ಟಿಸಿದ ಆವಿಷ್ಕಾರ
‘ನಾಲ್ಕು ಕಾರಿಡಾರ್‌ಗಳಲ್ಲಿ 26 ಲೆವೆಲ್ ಕ್ರಾಸಿಂಗ್‌ಗಳಿವೆ. ಪ್ರತಿಬಾರಿ ರೈಲು ಬರುವ ಮುಂಚೆ ಇಲ್ಲಿ ಗೇಟ್ ಹಾಕಬೇಕು. ಉಪನಗರ ರೈಲು ಯೋಜನೆ ಕಾಮಗಾರಿ ಪೂರ್ಣಗೊಂಡರೆ 5 ರಿಂದ 10 ನಿಮಿಷಗಳಿಗೆ ಒಂದು ರೈಲು ಸಂಚರಿಸಲಿದೆ. ಗೇಟ್ ಹಾಕಿ ತೆಗೆಯುವುದರ ಒಳಗೆ ಮತ್ತೊಂದು ರೈಲು ಬರುವ ಸಮಯವಾಗಿರುತ್ತದೆ. ಲೆವೆಲ್ ಕ್ರಾಸಿಂಗ್ ಕೆಲಸ ಮಾಡಲು ಸಾಧ್ಯವೇ ಇಲ್ಲ. ಎಲ್‌ಸಿಯಲ್ಲಿ ರೈಲು ಕೆಳಸೇತುವೆ ಅಥವಾ ಮೇಲ್ಸೇತುವೆ ನಿರ್ಮಾಣ ಮಾಡಬೇಕಿದ್ದರೆ ಭೂಸ್ವಾಧೀನ ಮಾಡಬೇಕು. ಅದಕ್ಕೆ ಇನ್ನಷ್ಟು ಸಮಯ ಬೇಕಾಗುತ್ತದೆ. ಬೇರೆ ಬೇರೆ ಕಾರಣಗಳಿಂದ ಈಗಾಗಲೇ ತಡವಾಗಿರುವ ಕಾಮಗಾರಿ ಇನ್ನಷ್ಟು ವಿಳಂಬವಾಗುತ್ತದೆ. ಇದನ್ನು ತಪ್ಪಿಸುವುದಕ್ಕಾಗಿ ನಾವೇ ಪರಿಹಾರ ಕಂಡುಕೊಳ್ಳಬೇಕಾಯಿತು. ಕಾಲದ ಅವಶ್ಯಕತೆಯೇ ಸೃಷ್ಟಿಸಿದ ಆವಿಷ್ಕಾರವೇ ಹಳಿ ಎತ್ತರಿಸುವ ಯೋಜನೆ’ ಎಂದು ಕೆ–ರೈಡ್ ಅಧಿಕಾರಿಗಳು ತಿಳಿಸಿದರು. 10 ಲೆವೆಲ್ ಕ್ರಾಸಿಂಗ್‌ಗಳಲ್ಲಿ ಮೇಲ್ಸೇತುವೆ ಅಥವಾ ಕೆಳ ಸೇತುವೆ ನಿರ್ಮಿಸಬೇಕಿದ್ದರೆ 16 ಎಕರೆ ಭೂಸ್ವಾಧೀನ ಮಾಡಬೇಕಿತ್ತು. ಅದಕ್ಕೆ ₹ 130 ಕೋಟಿ ಪರಿಹಾರ ನೀಡಬೇಕಿತ್ತು. ಕೆಳ ಸೇತುವೆ ನಿರ್ಮಿಸಿದಾಗ ಮಳೆಗಾಲದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಈ ಸಮಸ್ಯೆಗಳನ್ನು ಹಳಿ ಎತ್ತರಿಸುವ ಯೋಜನೆ ತಪ್ಪಿಸಿದೆ ಎಂದು ವಿವರಿಸಿದರು.
ಕಡಿಮೆಯಾಗಲಿರುವ ವಾಹನ ದಟ್ಟಣೆ
ಪ್ರತಿ ಲೆವೆಲ್ ಕ್ರಾಸಿಂಗ್‌ನಲ್ಲಿ ರೈಲು ಬಂದು ಹೋಗುವ ಸಮಯದಲ್ಲಿ ಕನಿಷ್ಠ 5 ನಿಮಿಷ ವಾಹನಗಳು ಸಾಲು ಗಟ್ಟಿ ನಿಂತಿರುತ್ತವೆ. ಮೊದಲೇ ವಾಹನ ದಟ್ಟಣೆ ಹೆಚ್ಚಿರುವ ಬೆಂಗಳೂರಿನಲ್ಲಿ ಇನ್ನಷ್ಟು ಬಿಗಡಾಯಿಸಲು ಇದು ಕೂಡ ಕಾರಣ. ಅಲ್ಲದೇ ಪ್ರತಿ ಎಲ್‌ಸಿಯಲ್ಲಿ ದಿನಕ್ಕೆ ಮೂವರು ರೈಲ್ವೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಗೇಟ್ ಹಾಕಿದ ಮೇಲೂ ಪಾದಚಾರಿಗಳು ಸೈಕಲ್‌ನಲ್ಲಿ ಸಾಗುವವರು ಗೇಟ್ ಬಳಿ ಬಗ್ಗಿ ಒಳಬಂದು ಹಳಿ ದಾಟುತ್ತಿದ್ದಾರೆ. ಇದು ಅಪಾಯಕಾರಿಯಾಗಿದ್ದು ಎಲ್‌ಸಿ ತೆರವು ಈ ಅಪಾಯವನ್ನು ತಪ್ಪಿಸಲಿದೆ. ಅಲ್ಲಿ ಸಿಬ್ಬಂದಿಯೂ ಬೇಕಾಗಿಲ್ಲ. ಲೆವೆಲ್ ಕ್ರಾಸಿಂಗ್ ಹತ್ತಿರ ಬರುವಾಗ ರೈಲುಗಳು ಹಾರ್ನ್ ಹಾಕುವುದರಿಂದ ಶಬ್ದ ಉಂಟಾಗುತ್ತಿತ್ತು. ಅದೂ ತಪ್ಪಲಿದೆ. ರಾಜ್‌ಕುಮಾರ್ ದುಗರ್ ಸಿಟಜನ್ಸ್ ಫಾರ್ ಸಿಟಿಜನ್ಸ್ (ಸಿ4ಸಿ) ಸಂಸ್ಥಾಪಕ
ಅಂಕಿ ಅಂಶ
185 ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ವ್ಯಾಪ್ತಿಯಲ್ಲಿರುವ ರೈಲ್ವೆ ಕ್ರಾಸಿಂಗ್‌ಗಳು
26 ಬೆಂಗಳೂರು ನಗರ ವ್ಯಾಪ್ತಿಯಲ್ಲಿ ತೆರವುಗೊಳ್ಳಲಿರುವ ರೈಲ್ವೆ ಕ್ರಾಸಿಂಗ್‌ಗಳು
52 ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ತೆರವಾಗಲಿರುವ ಒಟ್ಟು ರೈಲ್ವೆ ಕ್ರಾಸಿಂಗ್‌ಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.