ಬೆಂಗಳೂರು: ಉಪನಗರ ರೈಲು ಯೋಜನೆಗೆ ಅನುಮೋದನೆ ದೊರೆತು 607 ದಿನಗಳ ಬಳಿಕ ಕೊನೆಗೂ ಶಂಕುಸ್ಥಾಪನೆಗೆ ಕಾಲ ಕೂಡಿಬಂದಿದೆ. ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸುವರು.
ಮುಂಬೈ ಮಾದರಿಯಲ್ಲಿ ನಗರಕ್ಕೆ ಪ್ರತ್ಯೇಕವಾಗಿ ರೈಲು ಸೇವೆ ಆರಂಭಿಸುವ ಬಗ್ಗೆ ರೈಲ್ವೆ ಇಲಾಖೆ 1983ರಲ್ಲೇ ಪ್ರಸ್ತಾಪ ಸಿದ್ಧಪಡಿಸಿತ್ತು. 2019ರ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಯನ್ನು ಉಲ್ಲೇಖಿಸಲಾಯಿತು. 2020ರ ಅ. 21ರಂದು ರೈಲ್ವೆ ಮಂಡಳಿಯಿಂದ ಇದಕ್ಕೆ ಅನುಮೋದನೆಯೂ ದೊರೆಯಿತು. ಅನುಮೋದನೆದೊರೆತು ಎರಡು ವರ್ಷಗಳುಸಮೀಪಿಸುತ್ತಿದ್ದರೂ ಕಾಮಗಾರಿ ಆರಂಭವೇ ಆಗಲಿಲ್ಲ.
ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ( ಕೆ–ರೈಡ್) ಈ ಯೋಜನೆಯನ್ನು ನಾಲ್ಕು ಕಾರಿಡಾರ್‌ಗಳನ್ನಾಗಿ ವಿಂಗಡಿಸಿದೆ. 2,190 ದಿನಗಳ (6 ವರ್ಷ) ಕಾಲಮಿತಿ ನಿಗದಿ ಮಾಡಿಕೊಂಡಿದೆ. ಅದರಲ್ಲಿ ಈಗ ಶೇ 25ರಷ್ಟು ದಿನಗಳು ಪೂರ್ಣಗೊಂಡಿವೆ.
ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿಸಲು ರಾಜ್ಯ ಸರ್ಕಾರ ಕಾಯುತ್ತಿತ್ತು. ಜೂನ್ 20ರಂದು ನಗರಕ್ಕೆ ಬರಲಿರುವ ನರೇಂದ್ರ ಮೋದಿ ಅವರಿಂದ ಕಾಮಗಾರಿಗೆ ಚಾಲನೆ ಕೊಡಿಸಲು ನಿರ್ಧರಿಸಿದೆ.
‘₹15 ಸಾವಿರ ಕೋಟಿ ಮೊತ್ತದ ಉಪನಗರ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಇದು ನಗರದ ಸಂಚಾರ ದಟ್ಟಣೆಯ ಸಮಸ್ಯೆ ನೀಗಿಸಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.