ADVERTISEMENT

ಸುಗಮ ಸಂಗೀತ ಪ್ರಶಸ್ತಿ ಅನ್ಯರ ಪಾಲು: ವೈ.ಕೆ. ಮುದ್ದುಕೃಷ್ಣ ಬೇಸರ

‘ಸಂತ ಶಿಶುನಾಳ ಷರೀಫ ಪ್ರಶಸ್ತಿ’ಯನ್ನು ಸುಗಮ ಸಂಗೀತ ಸಾಧಕರಿಗೆ ಮಾತ್ರ ನೀಡುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 16:23 IST
Last Updated 21 ಆಗಸ್ಟ್ 2021, 16:23 IST
ವೈ.ಕೆ. ಮುದ್ದುಕೃಷ್ಣ
ವೈ.ಕೆ. ಮುದ್ದುಕೃಷ್ಣ   

ಬೆಂಗಳೂರು: ‘ಸಂಗೀತದ ವಿವಿಧ ಪ್ರಕಾರಗಳ ಸಾಧಕರಿಗೆ ನೀಡುತ್ತಿರುವ ‘ಸಂತ ಶಿಶುನಾಳ ಷರೀಫ ಪ್ರಶಸ್ತಿ’ಯನ್ನು ಸುಗಮ ಸಂಗೀತ ಕ್ಷೇತ್ರದ ಸಾಧಕರಿಗೆ ಮಾತ್ರ ನೀಡಬೇಕು’ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತು ಆಗ್ರಹಿಸಿದೆ.

ನಗರದಲ್ಲಿ ಶನಿವಾರ ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ನೇತೃತ್ವದಲ್ಲಿ ಸಭೆ ನಡೆಯಿತು. ಶ್ರೀನಿವಾಸ ಉಡುಪ, ನರಸಿಂಹ ನಾಯಕ್, ಮೃತ್ಯುಂಜಯ ದೊಡ್ಡವಾಡ, ಆನಂದ‌ ಮಾದಲಗೆರೆ, ಪ್ರೇಮಲತಾ ದಿವಾಕರ್, ಕಿಕ್ಕೇರಿ ಕೃಷ್ಣಮೂರ್ತಿ, ನಾಗಚಂದ್ರಿಕಾ ಭಟ್ ಸೇರಿದಂತೆ ಸುಗಮ ಸಂಗೀತ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು.

‘ಸರ್ಕಾರವು 1995ರಲ್ಲಿ ‘ಸಂತ ಶಿಶುನಾಳ ಷರೀಫ ಪ್ರಶಸ್ತಿ’ಯನ್ನು ಸ್ಥಾಪಿಸಿ, ಸುಗಮ ಸಂಗೀತ ಕ್ಷೇತ್ರದಲ್ಲಿ ಹೆಸರಾಗಿರುವ ಕಲಾವಿದರಿಗೆ ನೀಡಬೇಕೆಂದು ಆದೇಶ ಹೊರಡಿಸಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಂಗೀತದ ಬೇರೆ ಬೇರೆ ಪ್ರಕಾರಗಳಲ್ಲಿ ಸಾಧನೆ ಮಾಡಿದವರಿಗೂ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇದರಿಂದ ಸುಗಮ ಸಂಗೀತ ಕ್ಷೇತ್ರದ ಸಾಧಕರು ಪ್ರಶಸ್ತಿಯಿಂದ ವಂಚಿತರಾಗುತ್ತಿದ್ದಾರೆ’ ಎಂದು ವೈ.ಕೆ. ಮುದ್ದುಕೃಷ್ಣ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಜಾನಪದ ಶ್ರೀ, ಕನಕ-ಪುರಂದರ ಸೇರಿದಂತೆ ವಿವಿಧ ಪ‍್ರಶಸ್ತಿಗಳನ್ನು ಸಂಗೀತದ ಪ್ರಕಾರಗಳಿಗೆ ಇಡಲಾಗಿದೆ. ಹಾಗಾಗಿ, ಸುಗಮ ಸಂಗೀತಕ್ಕೆ ಮೀಸಲಿಟ್ಟಿರುವ ಪ್ರಶಸ್ತಿಯನ್ನು ಈ ಕ್ಷೇತ್ರದ ಸಾಧಕರಿಗೆ ಮಾತ್ರ ನೀಡಬೇಕು. ಸುಗಮ ಸಂಗೀತ ಕ್ಷೇತ್ರದಲ್ಲಿಯೇ ಹಲವು ಸಾಧಕರಿದ್ದಾರೆ’ ಎಂದು ತಿಳಿಸಿದರು.

‘ಕರ್ನಾಟಕದಲ್ಲಿ ಅದ್ಭುತವಾದ ಕಾವ್ಯ ಸಂಪತ್ತಿದೆ. ಸುಗಮ ಸಂಗೀತ ಎಂದರೇ ಕವಿತಾ ಗಾಯನ. ಜಾನಪದ, ತತ್ವಪದ, ದಾಸ ಸಾಹಿತ್ಯ ಹಾಗೂ ವಚನ ಹಾಡುವವರು ಕೂಡ ಸುಗಮ ಸಂಗೀತ ಗಾಯಕರು ಎಂದು ಸರ್ಕಾರಕ್ಕೆ ಅರ್ಜಿ ಹಾಕುತ್ತಿದ್ದಾರೆ. ಇದರಿಂದ ನಿಜವಾದ ಸುಗಮ ಸಂಗೀತ ಕಲಾವಿದರಿಗೆ ಕಾರ್ಯಕ್ರಮಗಳು ಸಿಗುತ್ತಿಲ್ಲ. ಹಾಗಾಗಿ, ಗುರುತಿಸಲ್ಪಟ್ಟ ಸುಗಮ ಸಂಗೀತ ಕಲಾವಿದರಿಗೆ ಮಾತ್ರ ಈ ಪ್ರಕಾರದಲ್ಲಿ ಕಾರ್ಯಕ್ರಮ ನೀಡಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.