ADVERTISEMENT

13ರಿಂದ ಸುಗ್ಗಿ–ಹುಗ್ಗಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 18:49 IST
Last Updated 10 ಜನವರಿ 2024, 18:49 IST
   

ಬೆಂಗಳೂರು: ಸಂಕ್ರಾಂತಿ ಹಬ್ಬದ ಅಂಗವಾಗಿ ಕೆಪಿಜಿ ತಂಡದ ವತಿಯಿಂದ ಇದೇ 13 ಮತ್ತು 14ರಂದು 2ನೇ ವರ್ಷದ ‘ಸುಗ್ಗಿ ಹುಗ್ಗಿ–2024’ ಕಾರ್ಯಕ್ರಮ ಜಕ್ಕೂರಿನಲ್ಲಿ ಆಯೋಜಿಸಲಾಗಿದೆ ಎಂದು ಮೀನಾಕ್ಷಿ ಕೃಷ್ಣ ಬೈರೇಗೌಡ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರಾಮೀಣ ಜೀವನದ ಶ್ರೀಮಂತ ಬದುಕನ್ನು ನಗರ ನಿವಾಸಿಗಳಿಗೂ ಪರಿಚಯಿಸಬೇಕೆಂಬ ಉದ್ದೇಶದಿಂದ ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸುಗ್ಗಿ–ಹುಗ್ಗಿ ಎಂಬ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಇದರಲ್ಲಿ ಗ್ರಾಮೀಣ ಆಹಾರ ಪದ್ಧತಿ, ಸಂಪ್ರದಾಯ, ಸಂಸ್ಕೃತಿಯ  ಕಾರ್ಯಕ್ರಮಗಳಿರುತ್ತವೆ. ಸಿರಿಧಾನ್ಯ ಮತ್ತು ಸಾವಯವ ಪದಾರ್ಥಗಳು ಸೇರಿದಂತೆ ವೈವಿಧ್ಯಮಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡುವ 80ಕ್ಕೂ ಹೆಚ್ಚು ಮಳಿಗೆಗಳಿರಲಿವೆ’ ಎಂದು ವಿವರಿಸಿದರು.

13ರ ಸಂಜೆ 4ಗಂಟೆಗೆ ನಡೆಯಲಿರುವ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಲಿದ್ದಾರೆ. ಸಾಂಸ್ಕೃತಿಕ ಮತ್ತು ಜಾನಪದ ನೃತ್ಯಗಳು ನಡೆಯಲಿದ್ದು, 14 ರಂದು ರಂಗೋಲಿ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಇದರಲ್ಲಿ ಬ್ಯಾಟರಾಯನಪುರ ಕ್ಷೇತ್ರದ ನಿವಾಸಿಗಳು ಮಾತ್ರ ಭಾಗವಹಿಸಬಹುದು. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುತ್ತದೆ. ಗಾಯಕ ರಘು ದಿಕ್ಷೀತ್‌ ಅವರ ತಂಡ ಸಂಗೀತದ ರಸದೌತಣ ನೀಡಲಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.