ADVERTISEMENT

‘ಸುಗ್ಗಿ–ಹುಗ್ಗಿ’ ಸಂಕ್ರಾಂತಿ ಸಂಭ್ರಮ: ಜನಪದ ಕಲೆಗಳ ಅನಾವರಣ

​ಪ್ರಜಾವಾಣಿ ವಾರ್ತೆ
Published 14 ಜನವರಿ 2024, 16:09 IST
Last Updated 14 ಜನವರಿ 2024, 16:09 IST
ರಾಶಿಪೂಜೆ ನೆರವೇರಿಸುವ ಮೂಲಕ  ‘ಸುಗ್ಗಿ–ಹುಗ್ಗಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ರಾಶಿಪೂಜೆ ನೆರವೇರಿಸುವ ಮೂಲಕ  ‘ಸುಗ್ಗಿ–ಹುಗ್ಗಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.   

ಯಲಹಂಕ: ಅಲಂಕೃತಗೊಂಡಿದ್ದ ಎತ್ತುಗಳು, ರಾಶಿಪೂಜೆ, ಚಿತ್ತಾರದ ರಂಗೋಲಿಗಳು, ಬಾನಂಗಳಲ್ಲಿ ಹಾರಾಡಿದ ಗಾಳಿಪಟಗಳು, ಹಳ್ಳಿ ಆಟಗಳು, ಜಾನಪದ ಕಲೆಗಳ ಅನಾವರಣ, ಕರಕುಶಲ ವಸ್ತುಗಳು, ಸಿರಿಧಾನ್ಯಗಳ ಉತ್ಪನ್ನಗಳು ಮತ್ತು ತಿಂಡಿ–ತಿನಿಸುಗಳ ಮಾರಾಟ, ಅಲಂಕೃತಗೊಂಡಿದ್ದ ಎತ್ತಿನ ಬಂಡಿಯಲ್ಲಿ ಸವಾರಿಮಾಡಿ ಖುಷಿಪಟ್ಟ ನಾಗರಿಕರು....

ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಕೆ.ಬಿ.ಜಿ ಸ್ವಯಂಸೇವಕರ ತಂಡದ ಸಹಯೋಗದಲ್ಲಿ ಜಕ್ಕೂರಿನ ಅರ್ಕಾವತಿ ಬಡಾವಣೆಯ ಮೈದಾನದಲ್ಲಿ ಆಯೋಜಿಸಿದ್ದ ‘ಸುಗ್ಗಿ–ಹುಗ್ಗಿ‘ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳಿವು. 

ಮೈದಾನದಲ್ಲಿ ಗ್ರಾಮೀಣ ಸೊಗಡಿನ ಸಂಕ್ರಾಂತಿ ಹಬ್ಬದ ವಾತಾವರಣವೇ ಮನೆಮಾಡಿತ್ತು. ಮಕ್ಕಳು ಮತ್ತು ಪೋಷಕರು ಗಾಳಿಪಟಗಳನ್ನು ಹಾರಿಸಿ ಖುಷಿಪಟ್ಟರು. ಅಲಂಕೃತಗೊಂಡಿದ್ದ ಎತ್ತಿನ ಬಂಡಿ, ಎತ್ತುಗಳು ಹಾಗೂ ಕುರಿ ಮತ್ತು ಮೇಕೆಗಳು ಜನರ ಗಮನ ಸೆಳೆದವು.

ADVERTISEMENT

ಜನರು ಎಳ್ಳು–ಬೆಲ್ಲ, ಬೇಯಿಸಿದ ಕಡಲೆಕಾಯಿ, ಅವರೆಕಾಯಿ, ಗೆಣಸು, ಕಬ್ಬಿನ ಜಲ್ಲೆ, ಸ್ಥಳದಲ್ಲೇ ತಯಾರಿಸಿದ ಸಿಹಿ–ಖಾರ ಪೊಂಗಲ್ ರುಚಿಯನ್ನು ಸವಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಹಳ್ಳಿ ಸೊಗಡಿನ ಅನ್ನ, ಕಾಳುಸಾರು, ಮೊಸರನ್ನ ಹಾಗೂ ಸಿಹಿ ಪೊಂಗಲ್‌ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕುಟುಂಬ ಸದಸ್ಯರೆಲ್ಲರೂ ಅಲಂಕೃತ ಎತ್ತಿನ ಬಂಡಿಯಲ್ಲಿ ಕುಳಿತು ಸವಾರಿ ಮಾಡಿ ಸಂಭ್ರಮಿಸಿದರು.

ವಿವಿಧ ಜಾನಪದ ಕಲಾತಂಡಗಳಿಂದ ಡೊಳ್ಳುಕುಣಿತ, ಧ್ವಜದಕುಣಿತ, ವೀರಗಾಸೆ, ಚಿಲಿಪಿಲಿ ಗೊಂಬೆ, ಕೊರಗಜ್ಜ ನೃತ್ಯ ಪ್ರದರ್ಶನಗಳು ಜನರನ್ನು ರಂಜಿಸಿದವು. ಮಕ್ಕಳಿಗಾಗಿ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ಮತ್ತು ಮಹಿಳೆಯರಿಗೆ ರಂಗೋಲಿ, ಜಾನಪದ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪೋಷಕರು ತಮ್ಮ ಮಕ್ಕಳೊಂದಿಗೆ ಕುಂಟೆಬಿಲ್ಲೆ, ಗೋಲಿ, ಲಗೋರಿ, ಚಿನ್ನಿದಾಂಡು, ಹಗ್ಗ–ಜಗ್ಗಾಟ, ಕಣ್ಣು ಕಟ್ಟಿ ಮಡಿಕೆ ಒಡೆಯುವ ಆಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಖುಷಿಪಟ್ಟರು.

ರಾಶಿಪೂಜೆ: ಕಬ್ಬಿನ ಜಲ್ಲೆ, ಅಲಂಕಾರಿಕ ಮಡಕೆಗಳು, ನವಧಾನ್ಯ ಮತ್ತು ಸಿರಿಧಾನ್ಯಗಳು, ಮನೆಯಲ್ಲಿ ಬಳಸುತ್ತಿದ್ದ ಹಳೆಯಕಾಲದ ಸಾಮಗ್ರಿಗಳು ಹಾಗೂ ರೈತರು ಬಳಸುತ್ತಿದ್ದ ಕೃಷಿ ಸಾಮಗ್ರಿಗಳಿಂದ ಅಲಂಕರಿಸಿದ್ದ ರಾಶಿಪೂಜೆಯು ಜನರನ್ನು ಆಕರ್ಷಿಸಿತು.‌

ಸಿರಿಧಾನ್ಯ, ಕೃತಕ ಆಭರಣಗಳು, ತೆಂಗಿನ ಚಿಪ್ಪಿನಿಂದ ತಯಾರಿಸಿದ ಅಲಂಕಾರಿಕ ವಸ್ತುಗಳು, ಇಳಕಲ್‌ ಸೀರೆ, ಮಂಡ್ಯ ಕೃಷಿ ಇಲಾಖೆಯ ಬೆಲ್ಲದ ಪರಿಷೆ ಸೇರಿದಂತೆ 100ಕ್ಕೂ ಹೆಚ್ಚು ಮಳಿಗೆಗಳಿದ್ದವು. ಹಣ್ಣುಗಳ ಐಸ್‌ ಕ್ರೀಂ, ಶೇಂಗಾ ಹೋಳಿಗೆ ಸೇರಿದಂತೆ ತಿಂಡಿತಿನಿಸುಗಳ ಮಾರಾಟ ಜೋರಾಗಿ ನಡೆಯಿತು. ಗಾಯಕ ರಘು ದೀಕ್ಷಿತ್‌ ತಂಡದಿಂದ ಸಂಜೆ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರಾಸುಗಳಿಂದ ಕಿಚ್ಚುಹಾಯಿಸಲಾಯಿತು.

‌ಈ ವೇಳೆ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಸಂಕ್ರಾಂತಿ ಹಬ್ಬವು ಗ್ರಾಮೀಣ ಸಂಸ್ಕೃತಿಯ ಸೊಗಡಿನ ಸಂಕೇತವಾಗಿದೆ. ನಗರ ಪ್ರದೇಶದವರಿಗೆ ಗ್ರಾಮೀಣ ಸಂಸ್ಕೃತಿ ಮತ್ತು ಜಾನಪದ ಕಲೆಗಳನ್ನು ಪರಿಚಯಿಸುವ ಉದ್ದೇಶದಿಂದ ಕ್ಷೇತ್ರದಲ್ಲಿ ಪ್ರತಿವರ್ಷ ಸುಗ್ಗಿ – ಹುಗ್ಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಶೇಷಾದ್ರಿ, ಕಾಂಗ್ರೆಸ್‌ ಮುಖಂಡರಾದ ಎನ್‌.ಎನ್‌.ಶ್ರೀನಿವಾಸಯ್ಯ, ಎಂ.ಜಯಗೋಪಾಲಗೌಡ, ಎನ್‌.ಕೆ.ಮಹೇಶ್‌ಕುಮಾರ್‌, ಶಿವರಾಜ್, ಪಿ.ವಿ.ಮಂಜುನಾಥಬಾಬು, ವಿ.ವಿ.ಪಾರ್ತಿಬರಾಜನ್‌, ಟಿ.ಜಿ.ಚಂದ್ರು, ಎಂ.ಹನುಮಂತೇಗೌಡ, ಎಂ.ಆನಂದ್, ಆರ್‌.ಎಂ.ಶ್ರೀನಿವಾಸ್‌ ಮತ್ತಿತರರು ಉಪಸ್ಥಿತರಿದ್ದರು.

ಕಲಾವಿದರು ಪೂಜಾಕುಣಿತ ಪ್ರಸ್ತುತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.