ಬೆಂಗಳೂರು: ರಿಚ್ಮಂಡ್ ಜಂಕ್ಷನ್‌ನ ಮೇಲ್ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಕ್ಯಾಬ್ ಚಾಲಕನನ್ನು ಅಶೋಕನಗರ ಸಂಚಾರ ಠಾಣೆ ಪೊಲೀಸರು ಸಮಯ ಪ್ರಜ್ಞೆ ತೋರಿ ರಕ್ಷಿಸಿದ್ದಾರೆ.
ಬಾಗಲೂರು ನಿವಾಸಿ ವೆಂಕಟರಾಜು(37) ರಕ್ಷಣೆಗೊಳಗಾದ ಕ್ಯಾಬ್ ಚಾಲಕ. ಬುಧವಾರ ಸಂಜೆ 6.30ರ ಸುಮಾರಿಗೆ ರಿಚ್ಮಂಡ್ ಜಂಕ್ಷನ್ ಮೇಲ್ಸೇತುವೆಯಲ್ಲಿ ಘಟನೆ ನಡೆದಿದೆ.
ವೆಂಕಟರಾಜುಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಬಾಗಲೂರಿನಲ್ಲಿ ಕುಟುಂಬ ಸಮೇತ ನೆಲಸಿದ್ದರು. ಕೆಲವು ತಿಂಗಳ ಹಿಂದೆ ವೆಂಕಟರಾಜು ಅವರ ಅಜ್ಜಿ ಮೃತಪಟ್ಟಿದ್ದರು. ಅದೇ ನೋವಿನಲ್ಲಿ ವೆಂಕಟರಾಜು ಇದ್ದರು. ‘ನನ್ನ ಅಜ್ಜಿ ಕರೆಯುತ್ತಿದ್ದಾಳೆ. ನಾನೂ ಹೋಗಬೇಕು’ ಎಂದು ಹೇಳಿಕೊಂಡು ಎಲ್ಲೆಂದರಲ್ಲಿ ಓಡಾಟ ನಡೆಸುತ್ತಿದ್ದರು. ಹೀಗಾಗಿ ಮನೆಯವರು ಅವರನ್ನು ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಿದ್ದರು ಎಂದು ಮೂಲಗಳು ತಿಳಿಸಿವೆ.
‘ವೆಂಕಟರಾಜು ಅವರಿಗೆ ಬುಧವಾರ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸಂಜೆ ಮನೆಗೆ ಕರೆದೊಯ್ಯುತ್ತಿದ್ದರು. ಪತ್ನಿ ಮತ್ತು ಭಾವಮೈದ ಕಾರಿನಲ್ಲಿ ಬಾಗಲೂರಿನ ಮನೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ರಿಚ್ಮಂಡ್ ಜಂಕ್ಷನ್‌ನ ಮೇಲ್ಸೇತುವೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಕಾರಿನಿಂದ ಇಳಿದಿದ್ದ ವೆಂಕಟರಾಜು ಅವರು ಏಕಾಏಕಿ ಸೇತುವೆಯಿಂದ ಜಿಗಿಯಲು ಯತ್ನಿಸಿದ್ದರು. ಮೊಬೈಲ್ ಸಹ ಕೆಳಕ್ಕೆ ಎಸೆದಿದ್ದರು. ಕೂಡಲೇ ಅವರ ಪತ್ನಿ, ಪತಿಯನ್ನು ರಕ್ಷಣೆ ಮಾಡುವಂತೆ ಕೂಗಿಕೊಂಡಿದ್ದರು. ಸೇತುವೆ ಕೆಳಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಶೋಕನಗರ ಠಾಣೆಯ ಪಿಎಸ್‌ಎ ಬಿ.ಎಂ.ಹರೀಶ್ ಕುಮಾರ್ ಮತ್ತು ಹೆಡ್ ಕಾನ್‌ಸ್ಟೆಬಲ್ ಡಿ.ಜಿ.ಲೋಕೇಶ್ ಅವರು ವೆಂಕಟರಾಜು ಅವರನ್ನು ರಕ್ಷಿಸಿ ಮನೆಗೆ ಕಳುಹಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.