ಬೆಂಗಳೂರು: ನಗರದ ಚಿತಾಗಾರಗಳಲ್ಲಿ ಕೋವಿಡ್ ಶವಗಳ ಸಾಲು ದಿನೇ ದಿನೇ ಹೆಚ್ಚುತ್ತಿದ್ದು, ರಾತ್ರಿ ಇಡೀ ಸಂಸ್ಕಾರ ನಡೆಸಿದರೂ ಈ ಸಾಲು ಕರಗುತ್ತಿಲ್ಲ. ಇದರೊಂದಿಗೆ ಪ್ರಭಾವಿಗಳ ಸಂಬಂಧಿಕರು ಮತ್ತು ಪರಿಚಿತರ ಶವ ಸಂಸ್ಕಾರಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.
‘ಗುರುವಾರ ಬೆಳಿಗ್ಗೆ 7ರಿಂದಲೇ ನಾವು ಸುಮನಹಳ್ಳಿ ಚಿತಾಗಾರದ ಬಳಿ ಕಾಯುತ್ತಿದ್ದೆವು. 8.30ರಿಂದ ಶವಸಂಸ್ಕಾರ ಪ್ರಕ್ರಿಯೆ ಪ್ರಾರಂಭಿಸಿದರು. ಆದರೆ, ರಾಜಕಾರಣಿಯೊಬ್ಬರ ಪರಿಚಿತರ ಶವವೊಂದು ಬರುತ್ತಿದ್ದಂತೆ ಆ ಆಂಬುಲೆನ್ಸ್ ಅನ್ನು ಒಳಗೆ ಬಿಟ್ಟರು. ತುಂಬಾ ಬೇಸರವಾಯಿತು’ ಎಂದು ಕೋವಿಡ್‌ನಿಂದ ಸಾವಿಗೀಡಾಗಿದ್ದ ವ್ಯಕ್ತಿಯೊಬ್ಬರ ಸಂಬಂಧಿ ಹೇಳಿದರು.
‘ಬುಧವಾರ ಬೆಳಿಗ್ಗೆಯಿಂದ ಗುರುವಾರ ಬೆಳಗಿನ ಜಾವ 5ರವರೆಗೆ 40 ಶವಗಳನ್ನು ದಹನ ಮಾಡಿದ್ದೇವೆ. ಇನ್ನೂ ಎಂಟು ಶವಗಳು ಬಾಕಿ ಇದ್ದವು. ಎರಡು ತಾಸು ವಿಶ್ರಾಂತಿ ತೆಗೆದುಕೊಂಡು 8.30ರಿಂದ ಮತ್ತೆ ಕೆಲಸ ಆರಂಭಿಸಿದೆವು’ ಎಂದು ಸುಮನಹಳ್ಳಿ ಶವಾಗಾರದ ಸಿಬ್ಬಂದಿ ವಿನೋದ್ ಹೇಳಿದರು.
‘ಸ್ವಲ್ಪ ಹೊತ್ತಿನಲ್ಲಿಯೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಪರಿಶೀಲನೆಯ ಉದ್ದೇಶದಿಂದ ಸುಮನಹಳ್ಳಿ ಚಿತಾಗಾರಕ್ಕೆ ಬಂದರು. ಅವರ ವಾಹನ ಬರುವುದಕ್ಕಿಂತ ಮುನ್ನ ಆಂಬುಲೆನ್ಸ್ ಒಂದು ಒಳಗೆ ಬಂದಿತು. ಆಂಬುಲೆನ್ಸ್‌ನಲ್ಲಿದ್ದ ವಾಹನ ಸಿ.ಟಿ. ರವಿಯವರ ಪರಿಚಿತರದ್ದು ಎಂದು ಉಳಿದವರು ಭಾವಿಸಿದರು. ಆದರೆ, ಆ ಆಂಬುಲೆನ್ಸ್‌ನಲ್ಲಿದ್ದ ಶವಕ್ಕೂ, ರವಿಯವರಿಗೂ ಸಂಬಂಧ ಇರಲಿಲ್ಲ. ಅವರ ವಾಹನದ ಜೊತೆಗೇ ಆಂಬುಲೆನ್ಸ್ ಒಳಗೆ ಬಂದಿದ್ದರಿಂದ ತಪ್ಪು ತಿಳಿವಳಿಕೆ ಉಂಟಾಯಿತು’ ಎಂದು ಅವರು ಹೇಳಿದರು.
ಪರಿಹಾರ ಘೋಷಿಸಿ:
‘ಚಿತಾಗಾರದ ಸಿಬ್ಬಂದಿ ಹಗಲು– ರಾತ್ರಿ ಕೆಲಸ ಮಾಡುತ್ತಿದ್ದಾರೆ. ದಿನವಿಡೀ ಉರಿಯುವ ಬೆಂಕಿ ಮುಂದೆ ಇರಬೇಕಾಗಿದೆ. ಅವರ ಜೀವಕ್ಕೆ ಯಾವುದೇ ಭದ್ರತೆ ಇಲ್ಲ. ಚಿತಾಗಾರದ ಸಿಬ್ಬಂದಿ ಕೋವಿಡ್‌ಗೆ ತುತ್ತಾಗಿ ಸಾವಿಗೀಡಾದರೆ ಸರ್ಕಾರ ಪರಿಹಾರ ಘೋಷಿಸಬೇಕು’ ಎಂದು ಚಿತಾಗಾರ ನೌಕರರ ಸಂಘದ ಅಧ್ಯಕ್ಷ ಆ. ಸುರೇಶ್ ಒತ್ತಾಯಿಸಿದರು.
‘ಚಿತಾಗಾರದ ಸಿಬ್ಬಂದಿಗೆ ಇನ್ನೂ ಗ್ಲೌಸ್ ಮತ್ತು ಮಾಸ್ಕ್ ವಿತರಿಸಿಲ್ಲ. ಪಿಪಿಇ ಕಿಟ್ ನೀಡುತ್ತಿಲ್ಲ. ಸರ್ಕಾರ ಅವರ ಸುರಕ್ಷತೆಗೆ ಒತ್ತು ನೀಡಬೇಕು’ ಎಂದು ಅವರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.