ADVERTISEMENT

ಬೇಸಿಗೆ: ಸಾಮಾನ್ಯಕ್ಕಿಂತ 3 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಏರಿಕೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2024, 14:51 IST
Last Updated 5 ಫೆಬ್ರುವರಿ 2024, 14:51 IST
ಉಷ್ಣಾಂಶ ಹೆಚ್ಚಳ– ಸಾಂಕೇತಿಕ ಚಿತ್ರ
ಉಷ್ಣಾಂಶ ಹೆಚ್ಚಳ– ಸಾಂಕೇತಿಕ ಚಿತ್ರ   

ಬೆಂಗಳೂರು: ಈ ವರ್ಷ ಫೆಬ್ರುವರಿ ಮೊದಲ ವಾರದಿಂದಲೇ ರಾಜ್ಯದಲ್ಲಿ ತಾಪಮಾನ ನಿಧಾನವಾಗಿ ಏರಿಕೆಯಾಗುತ್ತಿದೆ. ಬೇಸಿಗೆಯಲ್ಲಿ ಹೆಚ್ಚಿನ ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

ಬೇಸಿಗೆ ದಿನಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆ ಆಗಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಈಗಲೇ ಗರಿಷ್ಠ ಉಷ್ಣಾಂಶವು 35 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದೆ. ಬೇಸಿಗೆ ದಿನಗಳಲ್ಲಿ ಬಿಸಿಲ ತೀವ್ರತೆ ಹೆಚ್ಚಿರುವ ಸಾಧ್ಯತೆಯಿದೆ.

ಮಲೆನಾಡು ಜಿಲ್ಲೆಗಳಲ್ಲೂ ಸಾಮಾನ್ಯಕ್ಕಿಂತ ತಾಪಮಾನ ತುಸು ಏರಿಕೆ ಆಗಿರಲಿದೆ. ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಧಾರವಾಡ, ಕಲಬುರಗಿ, ಯಾದಗಿರಿ, ಕೊಪ್ಪಳ, ಗದಗ, ಬೀದರ್‌, ವಿಜಯಪುರ, ಬಾಗಲಕೋಟೆ, ರಾಯಚೂರು, ಬೆಳಗಾವಿ ಜಿಲ್ಲೆಗಳಲ್ಲಿ ಬಿಸಿಲ ತೀವ್ರತೆ ಹೆಚ್ಚಿರಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

ADVERTISEMENT

ಎಲ್‌ ನಿನೊ ವಿದ್ಯಮಾನದ ಪ್ರಭಾವ ಇನ್ನೂ ತಗ್ಗಿಲ್ಲ. ಅದರ ಪರಿಣಾಮವು ಬೇಸಿಗೆಯಲ್ಲೂ ಇರಲಿದೆ. ಫೆಬ್ರುವರಿ ಕೊನೆ ಅಥವಾ ಮಾರ್ಚ್‌ ಮೊದಲ ವಾರದಿಂದ ಬೇಸಿಗೆ ಪ್ರಭಾವ ಹೆಚ್ಚು ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ವಿಜ್ಞಾನಿ ಎ.ಪ್ರಸಾದ್ ವಿವರಿಸುತ್ತಾರೆ.

ವಾತಾವರಣದಲ್ಲಿ ತೇವಾಂಶದ ಕೊರತೆಯಾಗಿದೆ. ರಾಜ್ಯದ ಕೆಲವು ಭಾಗದಲ್ಲಿ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಬಿಸಿಗಾಳಿ ಬೀಸುವ ಆತಂಕವಿದೆ. ಮುಂಗಾರು ಪೂರ್ವ ಮಳೆ ಪ್ರಮಾಣವು ಕಡಿಮೆ ಇರಲಿದೆ ಎಂದು ತಜ್ಞರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.