ADVERTISEMENT

ಮಾಜಿ ಪ್ರಿಯಕರನ ಮೊಬೈಲ್‌ ಸುಲಿಗೆಗೆ ಸುಪಾರಿ: ಯುವತಿ ಸೇರಿ ಐವರ ಬಂಧನ

ಮೊಬೈಲ್‌ನಲ್ಲಿ ಖಾಸಗಿ ವಿಡಿಯೊ, ಫೋಟೊಗಳಿದ್ದ ಅನುಮಾನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 20:48 IST
Last Updated 28 ಸೆಪ್ಟೆಂಬರ್ 2024, 20:48 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಮಾಜಿ ಪ್ರಿಯಕರನ ಮೊಬೈಲ್‌ ಸುಲಿಗೆ ಮಾಡಿಸಿದ್ದ ಯುವತಿ ಸೇರಿ ಐವರನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಕೊಡತಿ ನಿವಾಸಿ ಪಿ.ಶ್ರುತಿ (29), ಸುಪಾರಿ ಪಡೆದಿದ್ದ ಎಚ್‌ಎಸ್‌ಆರ್‌ ಲೇಔಟ್‌ ನಿವಾಸಿಗಳಾದ ಹೊನ್ನಪ್ಪ (25), ಮನೋಜ್‌ ಕುಮಾರ್‌ (25), ಸುರೇಶ್‌ ಕುಮಾರ್‌ (26), ವೆಂಕಟೇಶ್‌ (27) ಬಂಧಿತರು. ಎಇಸಿಎಸ್‌ ಲೇಔಟ್‌ ನಿವಾಸಿ ವಂಶಿಕೃಷ್ಣ ರೆಡ್ಡಿ ದೂರು ನೀಡಿದ್ದರು. 

‘ಒಡಿಶಾದ ವಂಶಿಕೃಷ್ಣ ರೆಡ್ಡಿ ಮತ್ತು ತಮಿಳುನಾಡಿನ ಶ್ರುತಿ ಅವರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳು. ಇಬ್ಬರೂ ಭಿನ್ನ ಸಾಫ್ಟ್‌ವೇರ್‌ ಕಂಪನಿಗಳ ಉದ್ಯೋಗಿಗಳಾಗಿದ್ದು, ಪರಿಚಿತರಾಗಿದ್ದು ಪ್ರೀತಿಸುತ್ತಿದ್ದರು. ಮದುವೆ ಆಗಲು ನಿರ್ಧರಿಸಿದ್ದರು. ಶ್ರುತಿ ಬೇರೊಬ್ಬ ಯುವಕನ ಜೊತೆ ಸ್ನೇಹ ಬೆಳೆಸಿದ್ದರೆಂದು ಅಸಮಾಧಾನಗೊಂಡಿದ್ದ ವಂಶಿಕೃಷ್ಣ ಮದುವೆಯಾಗಲು ನಿರಾಕರಿಸಿದ್ದರು ಎನ್ನಲಾಗಿದೆ. ಈ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿ ಕೆಲವು ತಿಂಗಳಿಂದ ದೂರ ಆಗಿದ್ದರು’ ಎಂದು ಪೊಲೀಸರು ತಿಳಿಸಿದರು.

ಯುವತಿಗೆ ಅನುಮಾನ: ‘ವಂಶಿಕೃಷ್ಣ ಮೊಬೈಲ್‌ನಲ್ಲಿ ಖಾಸಗಿ ವಿಡಿಯೊಗಳು, ಫೋಟೊಗಳಿವೆ ಎಂಬ ಶಂಕೆಯಿಂದ  ಮೊಬೈಲ್‌ ಪರಿಶೀಲಿಸಲು ಆಲೋಚಿಸಿದ್ದರು. ಪರಿಚಯವಿದ್ದ ಆರೋಪಿ ಮನೋಜ್‌ ಕುಮಾರ್‌ನನ್ನು ಸಂಪರ್ಕಿಸಿ, ವಂಶಿಕೃಷ್ಣನ ಮೊಬೈಲ್‌ ಸುಲಿಗೆ ಮಾಡಲು ₹1.15 ಲಕ್ಷಕ್ಕೆ ಸುಪಾರಿ ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.

ಸೆ.20ರಂದು ವಂಶಿಕೃಷ್ಣನ ಸಂಪರ್ಕಿಸಿ ಉದ್ಯಾನವೊಂದಕ್ಕೆ ಬರಲು ಕೋರಿದ್ದರು.ಮಾತುಕತೆ ಬಳಿಕ ದ್ವಿಚಕ್ರ ವಾಹನದಲ್ಲಿ ಮನೆಗೆ ಹೊರಟಿದ್ದರು. ಆಗ ಸುಲಿಗೆ ಮಾಡಿದ್ದು, ಸಂಚು ತಿಳಿಯಬಾರದೆಂದು ಶ್ರುತಿ ಮೊಬೈಲ್‌ ಅನ್ನೂ ಕಸಿದಿದ್ದರು’ ಎಂದು ಹೇಳಿದರು.

‘ಈ ಮಧ್ಯೆ ಶ್ರುತಿ ಅವರು ದೂರು ನೀಡದಂತೆ ಮಾಜಿ ಪ್ರಿಯಕರನ ಮನವೊಲಿಸಿದ್ದರು. ಆದರೂ, ವಂಶಿಕೃಷ್ಣ ದೂರು ನೀಡಿದ್ದರು. ಬಳಿಕ ತನಿಖೆ ನಡೆಸಿದಾಗ, ಆರೋಪಿಗಳ ಸಂಚು ಬಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.