ಬೆಂಗಳೂರು: ಕಾವೇರಿ ಹಾಗೂ ಮಹದಾಯಿ ನೀರಿನ ಹಂಚಿಕೆ, ಮೇಕೆದಾಟು ಅಣೆಕಟ್ಟು, ಬೆಳಗಾವಿ ಗಡಿ ವಿವಾದ ಸೇರಿ ರಾಜ್ಯವನ್ನು ಕಾಡುತ್ತಿರುವ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕರ್ನಾಟಕದ ಹಕ್ಕುಗಳಿಗೆ ಬೆಂಬಲ ನೀಡುವ ಬಗ್ಗೆ ಕರ್ನಾಟಕದ ತಮಿಳು ಭಾಷಿಕರು ನಿರ್ಧಾರ ಕೈಗೊಂಡಿದ್ದಾರೆ.
ಮಾತೃ ಭಾಷಾ ಒಕ್ಕೂಟ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನ್ನಡಿಗರು ಹಾಗೂ ಕರ್ನಾಟಕ ತಮಿಳರ ಸಾಂಸ್ಕೃತಿಕ ಮತ್ತು ಒಗ್ಗಟ್ಟಿನ ಸಮ್ಮೇಳನದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
‘ಕರ್ನಾಟಕದ ಭಾಷೆ, ನೆಲ, ಜಲ, ಗಡಿ ಮತ್ತಿತರ ಹಕ್ಕುಗಳನ್ನು ರಕ್ಷಿಸಲು ಕನ್ನಡಿಗರು ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳಿಗೆ ಇಲ್ಲಿನ ತಮಿಳರು ಕರ್ನಾಟಕ ಸರ್ಕಾರಕ್ಕೆ ಬೆಂಬಲ ನೀಡಲಿದ್ದಾರೆ’ ಎಂಬ ತೀರ್ಮಾನವನ್ನೂ ಕಾರ್ಯಕ್ರಮದಲ್ಲಿ ತೆಗೆದುಕೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ‘ಕನ್ನಡಿಗರು ಮತ್ತು ತಮಿಳರು ದ್ರಾವಿಡ ಕುಲಕ್ಕೆ ಸೇರಿದವರು. ನಮ್ಮಲ್ಲಿ ಯಾವುದೇ ಭೇದವಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮಿಳರ ಮತ್ತು ಕನ್ನಡಿಗರ ನಡುವೆ ಸಾಮರಸ್ಯ ಮೂಡಿಸಲು ಯತ್ನಿಸಿದ್ದೆ. ಹಲಸೂರಿನಲ್ಲಿ ತಿರುವಳ್ಳವರ್ ಪ್ರತಿಮೆ ಲೋಕಾರ್ಪಣೆ ಮಾಡಿ, ಎರಡೂ ಭಾಷಿಕರ ನಡುವೆ ಭಾತೃತ್ವ ಸೃಷ್ಟಿಸಿದ್ದೆ. ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಕರುಣಾನಿಧಿ ಜತೆ ಮಾತನಾಡಿ, ಚೆನ್ನೈನಲ್ಲಿ ಸರ್ವಜ್ಞರ ಪ್ರತಿಮೆ ನಿರ್ಮಿಸಲು ಕೋರಿದ್ದೆ’ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ, ‘ಕಾವೇರಿ ವಿಚಾರವಾಗಿ ತಮಿಳರು ಮತ್ತು ಕನ್ನಡಿಗರ ನಡುವೆ ಭಿನ್ನಾಭಿಪ್ರಾಯವಿದೆ. ಉಳಿದಂತೆ, ತಮಿಳುನಾಡು ಮತ್ತು ಕರ್ನಾಟಕದ ನಡುವೆ ಉತ್ತಮ ಸಂಬಂಧ ಇರಬೇಕು’ ಎಂದರು.
ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್, ಕೊಡಗು ಶಾಸಕ ಮಂತರ್ ಗೌಡ, ಮಡಿಕೇರಿ ಶಾಸಕ ಎ.ಎಸ್. ಪೊನ್ನಣ್ಣ, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ರಾಜ್ಯಸಭೆ ಮಾಜಿ ಸದಸ್ಯ ಎಲ್. ಹನುಮಂತಯ್ಯ ಉಪಸ್ಥಿತರಿದ್ದರು. ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕನ್ನಡ ಕವಿಗೋಷ್ಠಿ ನಡೆದರೆ, ಬಾಬು ಶಶಿಧರನ್ ಅವರು ತಮಿಳು ಕವಿಗೋಷ್ಠಿ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.