ADVERTISEMENT

ರಾಜ್ಯದಲ್ಲಿ ಬಿದಿರು ಕೃಷಿ ವಿಸ್ತರಣೆಗೆ ಪ್ರೋತ್ಸಾಹ: ಸಚಿವ ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 15:35 IST
Last Updated 28 ಜೂನ್ 2024, 15:35 IST
<div class="paragraphs"><p>ನಗರದ ಕೃಷಿ ಇಲಾಖೆ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಬಿದಿರು ಮೌಲ್ಯವರ್ಧಿತ ವಸ್ತುಗಳ ಪ್ರದರ್ಶನವನ್ನು ಮಹಿಳೆಯರು ವೀಕ್ಷಿಸಿದರು. </p></div>

ನಗರದ ಕೃಷಿ ಇಲಾಖೆ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಬಿದಿರು ಮೌಲ್ಯವರ್ಧಿತ ವಸ್ತುಗಳ ಪ್ರದರ್ಶನವನ್ನು ಮಹಿಳೆಯರು ವೀಕ್ಷಿಸಿದರು.

   

ಪ್ರಜಾವಾಣಿ ಚಿತ್ರ / ಕಿಶೋರ್ ಕುಮಾರ್ ಬೋಳಾರ್

ಬೆಂಗಳೂರು: ‘ಬಿದಿರು ಕೃಷಿ ವಿಸ್ತರಣೆ, ಮೌಲ್ಯವರ್ಧಿತ ಉತ್ಪನ್ನಗಳ ವೃದ್ಧಿ ಹಾಗೂ ಅವುಗಳಿಗೆ ಮಾರುಕಟ್ಟೆ ಒದಗಿಸಲು ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಭರವಸೆ ನೀಡಿದರು.

ADVERTISEMENT

ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ, ಜಲಾನಯನ ಅಭಿವೃದ್ಧಿ ಹಾಗೂ ಅರಣ್ಯ ಇಲಾಖೆಗಳು, ಕೃಷಿ ಅರಣ್ಯ ರೈತರ ಮತ್ತು ತಂತ್ರಜ್ಞರ ಸಂಸ್ಥೆ, ಬಿದಿರು ಸೊಸೈಟಿ ಆಫ್‌ ಇಂಡಿಯಾ ಆಶ್ರಯದಲ್ಲಿ ಶುಕ್ರವಾರ ನಡೆದ ‘ಬಿದಿರು ಕೃಷಿ, ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ‘ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಬಿದಿರು ಕಡಿಮೆ ನೀರಿನಲ್ಲಿ, ಎಲ್ಲ ಹವಾಮಾನದಲ್ಲೂ ವೇಗವಾಗಿ ಬೆಳೆಯುತ್ತದೆ. ಮಣ್ಣಿನ ಸವಕಳಿ ತಡೆಯಲು, ಪರಿಸರ ಹಸಿರಾಗಿರಲು ಕಾರಣವಾಗುತ್ತದೆ. ಕಾಗದ, ಊದುಬತ್ತಿ, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಡೆಗಳಲ್ಲಿ ಬಿದಿರು ಬಳಕೆಯಾಗುತ್ತದೆ’ ಎಂದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಎ.ಬಿ. ಪಾಟೀಲ, ‘ದೇಶದ ವಿವಿಧ ರಾಜ್ಯಗಳ ಅರಣ್ಯ ನೀತಿಯಲ್ಲಿ ಬಿದಿರು ಕಟಾವಿಗೆ ರಿಯಾಯಿತಿ ನೀಡಲಾಗಿದೆ. ಆದರೆ, ಕರ್ನಾಟಕದಲ್ಲಿ ಆ ರಿಯಾಯಿತಿ ಇಲ್ಲ. ಅರಣ್ಯ ನೀತಿಯಲ್ಲಿರುವ ಈ ಸಮಸ್ಯೆ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರ ಸರ್ಕಾರವು ಬಿದಿರಿನ ಉತ್ಪನ್ನಗಳ ಮಾರಾಟದ ಮೇಲೆ ಶೇ 5 ಜಿಎಸ್‌ಟಿ ನಿಗದಿಪಡಿಸಿದೆ. ಆದರೆ, ಕರ್ನಾಟಕದಲ್ಲಿ ಶೇ 18 ಪಾವತಿಸಬೇಕಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬಿದಿರು ಸೊಸೈಟಿ ಆಫ್‌ ಇಂಡಿಯಾದ ಪುನಾಟಿ ಶ್ರೀಧರ್‌ ಮಾತನಾಡಿ, ‘ಭಾರತದಲ್ಲಿ ಮುಳ್ಳುಬಿದಿರು, ಜವಾರಿ ಬಿದಿರು, ಓಟಿ ಬಿದಿರು ಸೇರಿದಂತೆ ವೈವಿಧ್ಯಮಯ ಬಿದಿರು ಬೆಳೆಯಲಾಗುತ್ತಿದೆ. ಬಿದಿರು ಕೃಷಿಯಲ್ಲಿ ನಮ್ಮ ದೇಶ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ‘ ಎಂದರು.

‘ದೇಶದಲ್ಲಿ 1.31 ಕೋಟಿ ಎಕರೆ ಪ್ರದೇಶದಲ್ಲಿ ಬಿದಿರು ಬೆಳೆಯಲಾಗುತ್ತಿದೆ. ಚೀನಾದಲ್ಲಿ 70 ಲಕ್ಷ ಎಕರೆಯಲ್ಲಷ್ಟೇ ಬಿದಿರು ಕೃಷಿ ಇದ್ದರೂ, ಮೌಲ್ಯವರ್ಧಿತ ಉತ್ಪನ್ನ ತಯಾರಿಕೆ ಹಾಗೂ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿದೆ. ಬಿದಿರು ಕೃಷಿಕರಿಗೆ ಸರ್ಕಾರವು ಪ್ರೋತ್ಸಾಹ ನೀಡಬೇಕು’ ಎಂದು ಹೇಳಿದರು.

ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷೆ ಸಿ.ಎನ್‌. ನಂದಿನಿಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿ.ಕೆ. ಕುಮಾರ್‌, ಕೃಷಿ ಆಯುಕ್ತ ವೈ.ಎಸ್‌. ಪಾಟೀಲ, ಕೃಷಿ ಅರಣ್ಯ ರೈತರ ಮತ್ತು ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಅಜಯ್‌ ಮಿಶ್ರಾ, ಪದ್ಮನಾಭ ನಾಯ್ಕ, ಎಂ. ಮಹಂತೇಶಪ್ಪ, ಎಚ್‌.ಜಿ. ಶಿವಾನಂದ ಮೂರ್ತಿ, ಕೆ.ಎನ್‌. ಮೂರ್ತಿ ಭಾಗವಹಿಸಿದ್ದರು.

* ಎಲ್ಲ ಹವಾಮಾನದಲ್ಲೂ ಬೆಳೆಯುವ ಬಿದಿರು * ಮಣ್ಣು–ಮತ್ತು ನೀರಿನ ಸಂರಕ್ಷಣೆಗೆ ಸಹಕಾರಿ * ದೇಶದಲ್ಲಿ 1.3 ಕೋಟಿ ಎಕರೆಯಲ್ಲಿ ಬಿದಿರು ಕೃಷಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.