ADVERTISEMENT

ಬೆಂಗಳೂರು ಪಿಆರ್‌ಆರ್‌ | ಬಿಡಿಎಗೆ ಸುಪ್ರೀಂಕೋರ್ಟ್‌ ಸೂಚನೆ: ಮತ್ತೆ ಪರಿಸರ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 21:44 IST
Last Updated 17 ಮಾರ್ಚ್ 2020, 21:44 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಬೆಂಗಳೂರಿನಲ್ಲಿ 65 ಕಿ.ಮೀ. ಉದ್ದದ ಎಂಟು ಪಥಗಳ ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ನಿರ್ಮಿಸುವ ಯೋಜನೆಗೆ ಹಿನ್ನಡೆಯಾಗಿದೆ.

ಈ ಯೋಜನೆಗೆ ಸಂಬಂಧಿಸಿದಂತೆ ಪರಿಸರದ ಮೇಲಾಗುವ ಪರಿಣಾಮಗಳ ಅಧ್ಯಯನವನ್ನು ಹೊಸದಾಗಿ ಕೈಗೊಳ್ಳುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶಿಸಿದೆ.

ಈ ಯೋಜನೆಗೆ ಅನುಮೋದನೆ ಪಡೆಯುವಲ್ಲಿ ಅಧಿಕಾರಿಗಳು ಸಮರ್ಪಕವಾದ ಪ್ರಕ್ರಿಯೆಗಳನ್ನು ಪಾಲಿಸಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ADVERTISEMENT

ಅಭಿವೃದ್ಧಿ ವಿಷಯದಲ್ಲಿ ಪರಿಸರವನ್ನು ರಕ್ಷಿಸುವುದು ಮಹತ್ವದ್ದಾಗಿದೆ. ಇದರಿಂದ ಮಾತ್ರ ಸುಸ್ಥಿರ ಬೆಳವಣಿಗೆ ಸಾಧ್ಯ. ಪರಿಸರ ರಕ್ಷಣೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

2009 ಮತ್ತು 2010ರಲ್ಲಿ ಸಂಗ್ರಹಿಸಿದ ಮಾಹಿತಿಗಳ ಅನ್ವಯ 2014ರಲ್ಲಿ ಈ ಯೋಜನೆಗೆ ಪರಿಸರ ಇಲಾಖೆಯ ಅಂತಿಮ ಅನುಮತಿ ದೊರೆತಿತ್ತು. ಆದರೆ, ಈ ಅನುಮತಿಯು ಕೇಂದ್ರ ಸರ್ಕಾರ ಹೊರಡಿಸಿದ್ದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ.

1.5 ಹೆಕ್ಟೇರ್‌ ಅರಣ್ಯ ಭೂಮಿಯನ್ನು ಈ ಯೋಜನೆಗೆ ಬಳಸಲು ಉದ್ದೇಶಿಸಲಾಗಿದೆ. ಆದರೆ, ಈ ಭೂಮಿಗೆ ಪರ್ಯಾಯವಾಗಿ 25 ಎಕರೆ ನೀಡಲು ವಿಳಂಬ ಮಾಡಿರುವುದಕ್ಕೆ ನ್ಯಾಯಾಲಯ ಬಿಡಿಎ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು.

ಈ ಯೋಜನೆಗೆ ನಿರ್ದಿಷ್ಟವಾಗಿ ಎಷ್ಟು ಮರಗಳನ್ನು ಕಡಿಯಲಾಗುತ್ತದೆ ಎನ್ನುವ ಮಾಹಿತಿ ತಿಳಿಸಲು ಬಿಡಿಎ ಅಧಿಕಾರಿಗಳು ವಿಫಲರಾಗಿದ್ದಾರೆ. ಕೇವಲ 200ರಿಂದ 500 ಮರಗಳನ್ನು ಕಡಿಯಲಾಗುತ್ತಿದೆ ಎಂದು ತಿಳಿಸಿದ್ದಾರೆ. ಆದರೆ, 16,785 ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ ಎಂದು ನ್ಯಾಯಾಲಯ ತಿಳಿಸಿತು.

ಹೊಸದಾಗಿ ಪರಿಸರ ಅಧ್ಯಯನ ಕೈಗೊಳ್ಳುವುದರಿಂದ ಯೋಜನೆಯ ಆರಂಭಿಕ ಅಂದಾಜು ವೆಚ್ಚ ₹1000 ಕೋಟಿಯಿಂದ ₹12000 ಕೋಟಿಗೆ ಹೆಚ್ಚಳವಾಗಲಿದೆ ಎಂದು ಬಿಡಿಎ ಪರ ವಕೀಲರಾದ ಶ್ಯಾಮ್‌ ದಿವಾನ್‌ ಮತ್ತು ಸಂಜಯ್‌ ಎಂ. ನೂಲಿ ಅವರ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿತು.

ತ್ವರಿತವಾಗಿ ಹೊಸದಾಗಿ ಪರಿಸರ ಅಧ್ಯಯನ ಕೈಗೊಳ್ಳುವಂತೆ 2019ರ ಫೆಬ್ರುವರಿ 8ರಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ನೀಡಿದ್ದ ಆದೇಶವನ್ನು ನ್ಯಾಯಾಲಯ ಎತ್ತಿ ಹಿಡಿಯಿತು.

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಮತ್ತು ಹೇಮಂತ ಗುಪ್ತಾ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.