ADVERTISEMENT

ಪಟಾಕಿ ಮಾರಾಟ ನಿಯಂತ್ರಣಕ್ಕೆ ಬೆಂಗಳೂರು ನಗರದಲ್ಲಿ ‘ಕಣ್ಗಾವಲು ಸಮಿತಿ’

ಸುಪ್ರೀಂ ಕೋರ್ಟ್‌ ಆದೇಶದಂತೆ ಹಸಿರು ಪಟಾಕಿಗಷ್ಟೇ ಅನುಮತಿ: ಜಿಲ್ಲಾಧಿಕಾರಿ ಜಗದೀಶ್‌

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 22:43 IST
Last Updated 18 ಅಕ್ಟೋಬರ್ 2024, 22:43 IST
ಆನೇಕಲ್ ತಾಲ್ಲೂಕು ಅತ್ತಿಬೆಲೆಯಲ್ಲಿ 2023ರಲ್ಲಿ ಸಂಭವಿಸಿದ ಪಟಾಕಿ ದುರಂತ (ಸಂಗ್ರಹ ಚಿತ್ರ)
ಆನೇಕಲ್ ತಾಲ್ಲೂಕು ಅತ್ತಿಬೆಲೆಯಲ್ಲಿ 2023ರಲ್ಲಿ ಸಂಭವಿಸಿದ ಪಟಾಕಿ ದುರಂತ (ಸಂಗ್ರಹ ಚಿತ್ರ)   

ಬೆಂಗಳೂರು: ನಗರದಲ್ಲಿ ನಿಯಮವನ್ನು ಉಲ್ಲಂಘಿಸಿ ಪಟಾಕಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮೊದಲ ಬಾರಿಗೆ ‘ಕಣ್ಗಾವಲು ಸಮಿತಿ’ಯನ್ನು ರಚಿಸಲಾಗಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಮಿತಿ ರಚಿಸಲಾಗಿದ್ದು, ಸುಪ್ರೀಂ ಕೋರ್ಟ್‌ ತೀರ್ಮಾನದಂತೆ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಗಿದೆ.

ಅಂತರ ರಾಜ್ಯ ಗಡಿ ಅತ್ತಿಬೆಲೆ ಬಳಿ ಚೆಕ್ ಪೋಸ್ಟ್ ಪ‍್ರಾರಂಭಿಸಲು ಸೂಚಿಸಿದ ಜಗದೀಶ್‌ ಅವರು, ‘ಮಾರಾಟ ಪರವಾನಗಿ ನೀಡುವ ಮುನ್ನ ಅಧಿಕಾರಿಗಳು ಕಡ್ಡಾಯವಾಗಿ ಸ್ಥಳ ತನಿಖೆ ಮಾಡಬೇಕು. ಫೋಟೊಗಳನ್ನು ತೆಗೆದು ಕಡತಕ್ಕೆ ಲಗತ್ತಿಸಬೇಕು‘ ಎಂದಿದ್ದಾರೆ.

ADVERTISEMENT

‘ಪಟಾಕಿ ಗೋದಾಮುಗಳಿಗೆ ಅನುಮತಿ ನೀಡುವ ಮುನ್ನ ಪೋಲಿಸ್, ಅಗ್ನಿಶಾಮಕ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲಿಸಬೇಕು. ಮೂರು ದಿನದಲ್ಲಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಬೇಕು’ ಎಂದೂ ಆದೇಶಿಸಿದರು.

ಮಾರಾಟ ನಿಯಮ ಉಲ್ಲಂಘಿಸಿದರೆ ಪೋಲಿಸ್ ಇಲಾಖೆಯಿಂದ ಕ್ರಮ ಕೈಗೊಳ್ಳಬೇಕು. ಅತ್ತಿಬೆಲೆ ಚೆಕ್ ಪೋಸ್ಟ್‌ನಲ್ಲಿ ಸಾರಿಗೆ, ಪೊಲೀಸ್‌, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಿನದ 24 ತಾಸೂ ವಾಹನಗಳ ತಪಾಸಣೆ ನಡೆಸಬೇಕು. ಜಿಲ್ಲೆಯ ಕಂದಾಯ ಇಲಾಖೆ ನೌಕರರು ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಸೂಚಿಸಿದರು.

ಕಣ್ಗಾವಲು ಸಮಿತಿಯಲ್ಲಿ ಪುರಸಭೆ/ ನಗರ ಸಭೆ/ ಪಂಚಾಯಿತಿ, ಪೊಲೀಸ್‌, ಅಗ್ನಿಶಾಮಕ, ಮಾಲಿನ್ಯ ನಿಯಂತ್ರಣ ಮಂಡಳಿ, ಆರೋಗ್ಯ, ಕಂದಾಯ ಸೇರಿ 11 ಇಲಾಖೆಗಳ ಅಧಿಕಾರಿಗಳಿರುತ್ತಾರೆ. ಸಂಬಂಧಿಸಿದ ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಅವರು ಸಮಿತಿಯ ಉಸ್ತುವಾರಿ ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಬೆಂಗಳೂರು ಗ್ರಾಮಾಂತರ ಪೋಲಿಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ, ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ನಾಯಕ್, ತಹಶೀಲ್ದಾರ್ ಪ್ರಶಾಂತ ಗೌಡ ಪಾಟೀಲ್, ಉಪ ವಿಭಾಗಾಧಿಕಾರಿ ಪ್ರಮೋದ್ ಪಾಟೀಲ್ ಉಪಸ್ಥಿತರಿದ್ದರು.

ನಿಷೇಧವಾಗದ ಪಟಾಕಿ!

ಅತ್ತಿಬೆಲೆಯಲ್ಲಿ 2023ರ ಅಕ್ಟೋಬರ್‌ನಲ್ಲಿ ಸಂಭವಿಸಿದ್ದ ಪಟಾಕಿ ದುರಂತದಲ್ಲಿ 17 ಮಂದಿ ಮೃತಪಟ್ಟಿದ್ದರು. ಆಗ ಪಟಾಕಿ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಂತ್ರಣ ನಿಷೇಧದಂತಹ ಹೇಳಿಕೆಗಳೂ ಹೊರಬಂದಿದ್ದವು. ‘ಪಟಾಕಿ ತಯಾರಿಕೆ ಸಂಗ್ರಹ ಹಾಗೂ ಮಾರಾಟಕ್ಕೆ ಸಾಕಷ್ಟು ನಿಯಮಗಳು ಇವೆ. ಆದರೆ ವ್ಯಾಪಾರಿಗಳು ಬಹುತೇಕ ನಿಯಮಗಳನ್ನು ಪಾಲಿಸುವುದಿಲ್ಲ. ಇಲಾಖೆಗಳ ಅಧಿಕಾರಿಗಳಿಗೂ ಈ ಸಂಗತಿ ಗೊತ್ತಿದೆ. ಅವರೆಲ್ಲರೂ ವ್ಯಾಪಾರಿಗಳಿಂದ ಹಣ ಪಡೆದು ನಿರಾಕ್ಷೇಪಣಾ ಪತ್ರ ನೀಡುತ್ತಾರೆ. ಅವಘಡ ಸಂಭವಿಸಿದಾಗ ನಿಯಮಗಳ ಮಾತು ಬರುತ್ತಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಅತ್ತಿಬೆಲೆ ಪಟಾಕಿ ದುರಂತದ ಬಗ್ಗೆ ಹೇಳಿದ್ದರು. ಅತ್ತಿಬೆಲೆ ಪಟಾಕಿ ದುರಂತಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಆದೇಶದ ಮೇರೆಗೆ ಆನೇಕಲ್‌ ತಹಶೀಲ್ದಾರ್‌ ಆಗಿದ್ದ ಶಶಿಧರ್‌ ಮಾಡ್ಯಾಳ ಉಪ ತಹಶೀಲ್ದಾರ್‌ ವಿ.ಸಿ.ಶ್ರೀಧರ್ ರಾಜಸ್ವ ನಿರೀಕ್ಷಕ ಪುಷ್ಪರಾಜು ಮತ್ತು ಗ್ರಾಮ ಆಡಳಿತಾಧಿಕಾರಿ ಬಾಗೇಶ್‌ ಹೊಸಮನಿ ಅವರನ್ನು ಅಮಾನತುಗೊಳಿಸಲಾಗಿತ್ತು. ‘ದೆಹಲಿ ಮಾದರಿಯಲ್ಲಿ ನಗರದಲ್ಲೂ ರಾಜ್ಯದಲ್ಲಿಯೂ ಪಟಾಕಿ ನಿಷೇಧಿಸಲು ಸಮಗ್ರ ಕಾನೂನು ರೂಪಿಸುವ ಅಗತ್ಯವಿದೆ’ ಎಂದೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದರು.  ಈ ಬಾರಿ ದೀಪಾವಳಿ ಹಬ್ಬಕ್ಕೆ 15 ದಿನ ಉಳಿದಿದ್ದು ಇದೀಗ ಪಟಾಕಿ ಮಾರಾಟದ ಮೇಲೆ ಕಣ್ಗಾವಲು ಆರಂಭಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.