ಬೆಂಗಳೂರು: ಹೆಬ್ಬಾಳ ಸಮೀಪದ ಮನೋರಾಯನಪಾಳ್ಯದಲ್ಲಿ ತಾಯಿ ಹಾಗೂ ಆಕೆಯ ಇಬ್ಬರು ಮಕ್ಕಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಮಕ್ಕಳಿಬ್ಬರನ್ನು ಕೊಲೆ ಮಾಡಿದ ಆರೋಪದಡಿ ತಾಯಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಪುಷ್ಪಾವತಿ, ಬೆಂಗಳೂರಿನ ನಾಗರಾಜ್ ಎಂಬುವರನ್ನು 10 ವರ್ಷಗಳ ಹಿಂದೆ ಮದುವೆ ಆಗಿದ್ದರು. ಮನೋರಾಯನಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ದಂಪತಿಗೆ 7 ವರ್ಷದ ಮಗ ಜೀವನ್ ಹಾಗೂ 5 ತಿಂಗಳ ಹೆಣ್ಣು ಮಗುವಿತ್ತು.
‘ಜೂನ್ 10ರಂದು ಮನೆಯ ನೆಲದ ಮೇಲೆ ಅಂಗಾತ ಮಲಗಿದ್ದ ಸ್ಥಿತಿಯಲ್ಲಿ ಬಾಲಕ ಜೀವನ್ ಮೃತದೇಹ ಬಿದ್ದಿತ್ತು. ಬೆಡ್ ಮೇಲೆಯೇ ಮಗು ಸಹ ಸಾವನ್ನಪ್ಪಿತ್ತು. ಅದರ ಬಳಿಯೇ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪುಷ್ಪಾವತಿ ಮೃತದೇಹ ಕಂಡಿತ್ತು. ಮೂವರ ಸಾವಿನ ಬಗ್ಗೆ ನಾಗರಾಜ್ ದೂರು ನೀಡಿದ್ದರು’ ಎಂದು ಹೆಬ್ಬಾಳ ಪೊಲೀಸರು ಹೇಳಿದರು.
‘ಮೂವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು, ಇದೀಗ ವರದಿ ನೀಡಿದ್ದಾರೆ. ಪುಷ್ಪಾವತಿಯೇ ಮಕ್ಕಳಿಬ್ಬರನ್ನು ಕತ್ತು ಹಿಸುಕಿ ಕೊಂದು, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ವರದಿಯಲ್ಲಿ ಹೇಳಲಾಗಿದೆ. ಅದನ್ನು ಆಧರಿಸಿ ಕೊಲೆ ಆರೋಪದಡಿ ತಾಯಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.
‘ಮಕ್ಕಳಿಬ್ಬರಿಗೆ ವಿಷವುಣಿಷಿ ಕೊಲೆ ಮಾಡಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ಮೊದಲಿಗಿತ್ತು. ಈಗ ಮಕ್ಕಳನ್ನು ಕತ್ತು ಹಿಸುಕಿ ಕೊಂದಿದ್ದನ್ನು ವೈದ್ಯರೇ ದೃಢಪಡಿಸಿದ್ದಾರೆ. ಹೀಗಾಗಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.