ADVERTISEMENT

ರಸ್ತೆ ಗುಂಡಿ ಮುಚ್ಚದಿದ್ದರೆ ಅಧಿಕಾರಿಗಳ ಅಮಾನತು: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 15:48 IST
Last Updated 8 ಸೆಪ್ಟೆಂಬರ್ 2024, 15:48 IST
<div class="paragraphs"><p>ಡಿ.ಕೆ. ಶಿವಕುಮಾರ್</p></div>

ಡಿ.ಕೆ. ಶಿವಕುಮಾರ್

   

ಬೆಂಗಳೂರು: ‘ನಿಗದಿತ ಗಡುವಿನ ಒಳಗೆ ರಸ್ತೆಗಳ ಗುಂಡಿ ಮುಚ್ಚಬೇಕು. ಈ ವಿಚಾರದಲ್ಲಿ ಬೇಜಾವಾಬ್ದಾರಿ ತೋರುವ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ ನೀಡಿದರು.

ವೈಯಾಲಿಕಾವಲ್ ಬಿಬಿಎಂಪಿ ಕಚೇರಿಯಲ್ಲಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು. 

ADVERTISEMENT

‘15 ದಿನಗಳ ಒಳಗೆ ನಗರದ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಬೇಕು. ಎಷ್ಟೇ ದೊಡ್ಡ ಅಧಿಕಾರಿಯಾದರೂ ನಿಂತು ಕೆಲಸ ಮಾಡಿಸಬೇಕು ಎಂದು ನಿರ್ದೇಶನ ನೀಡಿದ್ದೇನೆ. ರಸ್ತೆ ಗುಂಡಿ ವಿಚಾರವಾಗಿ ಸಾರ್ವಜನಿಕರಿಂದ ಮತ್ತೆ ದೂರು ಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಬೀಳುವ ಸಾಧ್ಯತೆ ಹೆಚ್ಚಾಗಿದ್ದು, ಬಹಳ ಜಾಗರೂಕರಾಗಿ ಇರಬೇಕು. ಮಳೆ ಬೀಳುವ ಸಂದರ್ಭದಲ್ಲಿ ನೀರು ನಿಲ್ಲುವ ಹಾಗೂ ಮನೆಗಳಿಗೆ ನುಗ್ಗುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಬೇಕು. ಮಳೆಗೆ ಬೀಳಬಹುದಾದ ಮರಗಳನ್ನು ಗುರುತಿಸಿ ಮೇಲ್ಭಾಗದಲ್ಲಿ ಕಟಾವು ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರತಿಜ್ಞಾ ಕಾರ್ಯಕ್ರಮ:

‘ಮಹಾತ್ಮಾ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನಕ್ಕೆ 100 ವರ್ಷ ತುಂಬಿರುವುದರಿಂದ ಬೆಂಗಳೂರು ನಗರದ ಎಲ್ಲ ಶಾಲೆಗಳಲ್ಲಿ (ಪಾಲಿಕೆ ಹಾಗೂ ಖಾಸಗಿ ಶಾಲೆಗಳೂ ಸೇರಿ) ಗಾಂಧಿ ಜಯಂತಿ ದಿನ ಸ್ವಚ್ಛತೆ ಬಗ್ಗೆ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ನಡೆಸಲಾಗುವುದು. ಸ್ವಚ್ಛತೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.