ADVERTISEMENT

ಬೆಂಗಳೂರು: ಇಬ್ಬರು ಪರಿಸರ ಅಧಿಕಾರಿಗಳ ಅಮಾನತು

ಪ್ಲಾಸ್ಟಿಕ್ ಸಂಸ್ಕರಣೆ ಘಟಕಕ್ಕೆ ಸ್ಥಾಪನಾ, ಚಾಲನೆಗೆ ಅಕ್ರಮ ಸ‌ಮ್ಮತಿ ಪತ್ರ

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 15:27 IST
Last Updated 5 ಜನವರಿ 2024, 15:27 IST
ಎಸ್‌.ಕೆ. ವಾಸುದೇವ್‌
ಎಸ್‌.ಕೆ. ವಾಸುದೇವ್‌   

ಬೆಂಗಳೂರು: ಪ್ಲಾಸ್ಟಿಕ್‌ ಸಂಸ್ಕರಣೆ ಘಟಕದ ಸ್ಥಾಪನಾ ಮತ್ತು ಚಾಲನಾ ಸಮ್ಮತಿಗೆ ಅಕ್ರಮವಾಗಿ ಪ್ರಮಾಣಪತ್ರ ನೀಡಿದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಇಬ್ಬರು ಪರಿಸರ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.‌

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಬೆಂಗಳೂರು ದಕ್ಷಿಣ ವಲಯ ಮತ್ತು ರಾಮನಗರ ವಲಯ ಕಚೇರಿಯಲ್ಲಿ ಹಿರಿಯ ಪರಿಸರ ಅಧಿಕಾರಿಯಾಗಿದ್ದ ಎಸ್‌.ಕೆ. ವಾಸುದೇವ್‌ ಹಾಗೂ  ರಾಮನಗರ ಪ್ರಾದೇಶಿಕ ಕಚೇರಿಯಲ್ಲಿ ಪರಿಸರ ಅಧಿಕಾರಿಯಾಗಿರುವ ಸಿ.ಆರ್‌. ಮಂಜುನಾಥ್‌ ಅವರನ್ನು ಅಮಾನತುಗೊಳಿಸಿ ಮಂಡಳಿ ಅಧ್ಯಕ್ಷ ಶಾಂತ್‌ ಎ. ತಿಮ್ಮಯ್ಯ ಆದೇಶಿಸಿದ್ದಾರೆ.

ರಾಮನಗರದ ಹಾರೋಹಳ್ಳಿಯಲ್ಲಿ ಎನ್ವಿರೋ ರಿಸೈಕ್ಲೀನ್‌ ಸಂಸ್ಥೆಯ ಪ್ಲಾಸ್ಟಿಕ್‌ ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಅಕ್ರಮವಾಗಿ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಿಗೆ 2023ರ ಅಕ್ಟೋಬರ್‌ 26ರಂದು ನಿರ್ದೇಶನ ನೀಡಿದ್ದರು. 

ADVERTISEMENT

ಈ ಬಗ್ಗೆ ವರದಿ ನೀಡಲು ಮುಖ್ಯ ಪರಿಸರ ಅಧಿಕಾರಿ–3 ಅವರಿಗೆ ಸದಸ್ಯ ಕಾರ್ಯದರ್ಶಿಯವರು ಸೂಚಿಸಿದ್ದರು. 2023ರ ನವೆಂಬರ್ 10ರಂದು ವರದಿ ನೀಡಲಾಗಿತ್ತು.

ಸಿ.ಆರ್‌. ಮಂಜುನಾಥ್‌

‘ಎಸ್‌.ಕೆ. ವಾಸುದೇವ್‌, ಸಿ.ಆರ್‌. ಮಂಜುನಾಥ್‌ ಅವರು ಅಕ್ರಮ ಪ್ರಕರಣಕ್ಕೆ ನೇರವಾಗಿ ಹೊಣೆಗಾರರು. ಇವರ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಮಂಡಳಿ ನೌಕರರಿಗೆ ತಕ್ಕುದ್ದಲ್ಲದ ರೀತಿಯಲ್ಲಿ ವರ್ತಿಸಿ, ಕರ್ತವ್ಯ ನಿರ್ಲಕ್ಷ್ಯ ತೋರಿಸಿದ್ದೀರಿ. ಇದರಿಂದ ನಿಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು ಅತಿ ಸೂಕ್ತ ಎಂದು ಪರಿಗಣಿಸಲಾಗಿದೆ. ನಿಮ್ಮನ್ನು ಕರ್ತವ್ಯದಲ್ಲಿ ಮುಂದುವರಿಸಿದರೆ ಸಾಕ್ಷಿ, ದಾಖಲೆಗಳನ್ನು ನಾಶಪಡಿಸುವ ಅವಕಾಶವಿರುವುದರಿಂದ ಅಮಾನತಿನಲ್ಲಿಡಲಾಗುತ್ತಿದೆ. ನಿಮ್ಮ ಕೇಂದ್ರ ಸ್ಥಾನವನ್ನು ಬೆಂಗಳೂರಿಗೆ ಬದಲಾಯಿಸಲಾಗಿದೆ. ಇಲಾಖಾ ವಿಚಾರಣೆ ನಡೆಸಲಾಗುತ್ತದೆ’ ಎಂದು ಜ.3ರಂದು ನೀಡಿರುವ ಆದೇಶದಲ್ಲಿ ಮಂಡಳಿ ಅಧ್ಯಕ್ಷರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.