ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಭಾನುವಾರ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಬ್ಯಾಗ್ ಸಿಬ್ಬಂದಿ ಹಾಗೂ ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು.
ನಿಲ್ದಾಣದ ಆಗಮನ ದ್ವಾರದ ಬಳಿಯಿದ್ದ ಟ್ರಾಲಿಯಲ್ಲಿ ಬ್ಯಾಗ್ ಇತ್ತು. ಹಲವು ಗಂಟೆ ಕಳೆದರೂ ಯಾರೂ ಬ್ಯಾಗ್ ತೆಗೆದುಕೊಂಡು ಹೋಗಿರಲಿಲ್ಲ. ಆತಂಕಗೊಂಡ ಪ್ರಯಾಣಿಕರೊಬ್ಬರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂದ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದರು. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳವನ್ನೂ ಸ್ಥಳಕ್ಕೆ ಕರೆಸಿ ತಪಾಸಣೆ ಮಾಡಿಸಿದರು. ಬ್ಯಾಗ್ ತೆರೆದು ನೋಡಿದಾಗ, ಬಟ್ಟೆ ಹಾಗೂ ದಿನಬಳಕೆ ವಸ್ತುಗಳಿರುವುದು ಗೊತ್ತಾಯಿತು.
‘ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರೊಬ್ಬರು ಬ್ಯಾಗ್ ಮರೆತು ಹೋಗಿದ್ದಾರೆ. ಅದರಲ್ಲಿ ಬಾಂಬ್ ಇರುವ ಸುದ್ದಿ ಹರಡಿದ್ದರಿಂದ ನಿಲ್ದಾಣದಲ್ಲಿ ಆತಂಕ ಇತ್ತು. ಅದರಲ್ಲಿ ಯಾವುದೇ ಸ್ಫೋಟಕ ವಸ್ತುಗಳಿಲ್ಲ ಎಂಬುದು ಖಚಿತವಾದ ನಂತರ ಎಲ್ಲರೂ ನಿಟ್ಟುಸಿರುಬಿಟ್ಟರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಇಂಥ ಅನುಮಾನಾಸ್ಪದ ವಸ್ತುಗಳು ಮೇಲಿಂದ ಮೇಲೆ ಪತ್ತೆಯಾಗುತ್ತಿರುತ್ತವೆ. ಯಾವುದೇ ಅನುಮಾನಾಸ್ಪದ ವಸ್ತು ಕಂಡರೂ ನಿರ್ಲಕ್ಷಿಸುವುದಿಲ್ಲ. ಎಲ್ಲವನ್ನೂ ಭದ್ರತಾ ಸಿಬ್ಬಂದಿ ತಪಾಸಣೆ ಮಾಡುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.