ಬೆಂಗಳೂರು: ನಿವೃತ್ತ ಹೆಡ್ ಕಾನ್‌ಸ್ಟೆಬಲ್ ಮುನಿ ಆಂಜನೇಯ (69) ಅವರು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ದೊಡ್ಡಬಳ್ಳಾಪುರದ ಮುನಿ ಆಂಜನೇಯ, ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಬಸ್ ನಿಲ್ದಾಣದಲ್ಲಿ ಕುಳಿತ ಜಾಗದಲ್ಲೇ ಅವರು ಮೃತಪಟ್ಟಿದ್ದಾರೆ. ಅವರ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಸ್ನೇಹಿತನ ಮನೆಗೆ ತೆರಳಿ, ಅಲ್ಲಿಂದ ಧರ್ಮಸ್ಥಳಕ್ಕೆ ಹೋಗಿ ಬರುವುದಾಗಿ ಮುನಿ ಆಂಜನೇಯ ಅವರು ಕುಟುಂಬದವರಿಗೆ ತಿಳಿಸಿದ್ದರು. ಸೋಮವಾರ ಮಧ್ಯಾಹ್ನ ಮನೆ ಬಿಟ್ಟಿದ್ದರು. ಅಲ್ಲಿಂದ ಮೆಜೆಸ್ಟಿಕ್‌ನ ಬಸ್ ನಿಲ್ದಾಣಕ್ಕೆ ಬಂದಿದ್ದರು. ರಾತ್ರಿ ಅವರು ಮೃತಪಟ್ಟಿದ್ದಾರೆ’ ಎಂದರು.
‘ಹೃದಯಾಘಾತದಿಂದ ಮುನಿ ಆಂಜನೇಯ ಮೃತಪಟ್ಟಿರಬಹುದೆಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಅವರ ಬಳಿ ಇದ್ದ ಚಿನ್ನಾಭರಣ ಹಾಗೂ ನಗದನ್ನು ಯಾರೂ ತೆಗೆದುಕೊಂಡು ಹೋಗಿರುವುದಾಗಿ ಕುಟುಂಬಸ್ಥರು ದೂರುತ್ತಿದ್ದಾರೆ. ಸಾವಿಗೆ ಬೇರೆ ಕಾರಣವೂ ಇರಬಹುದು. ಎಲ್ಲ ಆಯಾಮದಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.