ADVERTISEMENT

ಸ್ವಚ್ಛ ಸರ್ವೇಕ್ಷಣ್‌ | ಬಿಬಿಎಂಪಿಗೆ ರಾಷ್ಟ್ರಮಟ್ಟದಲ್ಲಿ 125ನೇ ರ್‍ಯಾಂಕ್‌

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 18:29 IST
Last Updated 11 ಜನವರಿ 2024, 18:29 IST
<div class="paragraphs"><p>ಬಿಬಿಎಂಪಿ&nbsp;</p></div>

ಬಿಬಿಎಂಪಿ 

   

ಬೆಂಗಳೂರು: ಸ್ವಚ್ಛ ಸರ್ವೇಕ್ಷಣ್‌ –2023 ವಾರ್ಷಿಕ ಸ್ವಚ್ಛತಾ ಸಮೀಕ್ಷೆಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಷ್ಟ್ರಮಟ್ಟದಲ್ಲಿ 125ನೇ ರ್‍ಯಾಂಕ್‌ ಪಡೆದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 25ರಷ್ಟು ಹೆಚ್ಚು ಅಂಕಗಳನ್ನು ಗಳಿಸಿದೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಆಯೋಜಿಸುವ ಸ್ವಚ್ಛ ಸರ್ವೇಕ್ಷಣ್‌ ಸಮೀಕ್ಷೆಯಲ್ಲಿ ತ್ಯಾಜ್ಯ ಸಂಗ್ರಹ, ವಿಂಗಡಣೆ, ಸಂಸ್ಕರಣೆಯಲ್ಲಿ ಬಿಬಿಎಂಪಿ ಪ್ರಗತಿ ಸಾಧಿಸಿದ್ದರೂ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದಿದೆ. ಮೊದಲನೆಯ ಸ್ಥಾನದಲ್ಲಿ ಮೈಸೂರು ಮಹಾನಗರ ಪಾಲಿಕೆ ಮತ್ತು ಹೊಸದುರ್ಗ ಪುರಸಭೆಗಳಿವೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮತ್ತು ಬೈಲಹೊಂಗಲ ಪುರಸಭೆಯ ಎರಡನೇ ಸ್ಥಾನದಲ್ಲಿವೆ.

ADVERTISEMENT

2022ರಲ್ಲಿ 40 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯಿರುವ ಸ್ಥಳೀಯ ಸಂಸ್ಥೆಗಳ ವರ್ಗದಲ್ಲಿ 45 ನಗರಗಳ ಪೈಕಿ ಬಿಬಿಎಂಪಿ 43ನೇ ಸ್ಥಾನ ಗಳಿಸಿತ್ತು. 2021ರಲ್ಲಿ 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯಿರುವ ವರ್ಗದಲ್ಲಿ 48 ನಗರಗಳಲ್ಲಿ 28ನೇ ಸ್ಥಾನ ಗಳಿಸಿತ್ತು. 2023ರಲ್ಲಿ 1 ಲಕ್ಷಕೂ ಹೆಚ್ಚಿನ ಜನಸಂಖ್ಯೆ ವರ್ಗದಲ್ಲಿ 446 ಸ್ಥಳೀಯ ಸಂಸ್ಥೆಗಳಲ್ಲಿ 125ನೇ ಸ್ಥಾನವನ್ನು ಬಿಬಿಎಂಪಿ ಗಳಿಸಿದೆ.

ನೈರ್ಮಲ್ಯ ವರ್ಗದ ಸಮೀಕ್ಷೆಯಲ್ಲಿ ಬಿಬಿಎಂಪಿ ಪ್ರಥಮ ಬಾರಿಗೆ 2023ರಲ್ಲಿ ಉನ್ನತ ಸ್ಥಾನ ಪಡೆದಿದೆ. ‘ಒಡಿಎಫ್‌++’ನಿಂದ ‘ವಾಟರ್‌ +’ ನಗರವೆಂಬ ಶ್ರೇಯಾಂಕ ಪಡೆದಿದೆ. ಜನರು ಸ್ವಚ್ಛತೆಯಲ್ಲಿ ಭಾಗವಹಿಸುವ ‘ನಾಗರಿಕರ ಧ್ವನಿ’ ವರ್ಗದಲ್ಲಿ 2022ಕ್ಕಿಂತ ಶೇ 30ರಷ್ಟು ಹೆಚ್ಚು ಅಂಕಗಳನ್ನು ಗಳಿಸಿದೆ. 

‘ಸ್ವಚ್ಛತೆಯಲ್ಲಿ ಉತ್ತಮ ಶ್ರೇಯಾಂಕ‌ಗಳಿಸುವಲ್ಲಿ ತಳಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವವರ ಪಾತ್ರ ಅತ್ಯಂತ ದೊಡ್ಡದು. ಕಳೆದ ಬಾರಿ ಶೇ 36ರಷ್ಟು ಶ್ರೇಯಾಂಕ ಗಳಿಸಿ ‘ಜಸ್ಟ್‌ ಪಾಸ್‌’ ಆಗಿದ್ದ ಬಿಬಿಎಂಪಿ ಈ ವರ್ಷ ಶೇ 61ರಷ್ಟು ಅಂಕ ಗಳಿಸಿ ‘ಫಸ್ಟ್‌ ಕ್ಲಾಸ್’ ಆಗಿದೆ. ಇದನ್ನು ಉಳಿಸಿಕೊಂಡು, ಮುಂದೆ ‘ಡಿಸ್ಟಿಂಕ್ಷನ್’ ಪಡೆಯುವತ್ತ ಎಲ್ಲರೂ ಪ್ರಯತ್ನಿಸಬೇಕು’ ಎಂದು ಬಿಬಿಎಂಪಿ ‌ಸ್ವಚ್ಛ ಸರ್ವೇಕ್ಷಣ್‌ಗೆ ಸಲಹೆಗಾರರಾದ ರಾಮ್‌ಪ್ರಸಾದ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.