ಬೆಂಗಳೂರು: ತಿಪಟೂರಿನ ಷಡಕ್ಷರಿ ಮಠದ ರುದ್ರಮುನಿಸ್ವಾಮಿ ಅವರಿಗೆ ಬೆದರಿಕೆ ಹಾಕಿ, ₹6 ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪದ ಅಡಿ ಮಹಿಳೆಯೊಬ್ಬರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಿದ್ಯಾ ಬಿರಾದಾರ್ ಪಾಟೀಲ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
‘ಆಗಸ್ಟ್ 31ರಂದು ಮಧ್ಯಾಹ್ನ 3ರ ಸುಮಾರಿಗೆ ಸ್ವಾಮೀಜಿ ಅವರಿಗೆ ಕರೆ ಮಾಡಿದ್ದ ಮಹಿಳೆ, ತಾನು ರಾಜ್ಯ ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷೆ ಹಾಗೂ ಲೋಕಾಯುಕ್ತ ಬಿ.ಎಸ್.ಪಾಟೀಲ ಅವರ ಸಹೋದರಿ ಎಂಬುದಾಗಿ ಪರಿಚಯ ಮಾಡಿಕೊಂಡಿದ್ದರು. ಡಿ.ಬಿ.ಪಲ್ಲವಿ ಹಾಗೂ ಸೂರ್ಯನಾರಾಯಣ ಎಂಬುವರು ತಮಗೆ ಸೇರಿದ ದೃಶ್ಯಾವಳಿ ಹಾಗೂ ದೂರಿನ ಪತ್ರ ನೀಡಿ, ಕ್ರಮ ಕೈಗೊಳ್ಳುವಂತೆಯೂ ಕೋರಿದ್ದಾರೆಂದು ಹೇಳಿಕೊಂಡಿದ್ದರು. ಅಲ್ಲದೇ ವಿದ್ಯಾ ಅವರು ಸ್ವಾಮೀಜಿ ಅವರಿಗೆ ಪದೇ ಪದೇ ಕರೆ ಮಾಡಿ ಕಿರುಕುಳು ನೀಡುತ್ತಿದ್ದರು’ ಎಂಬುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
‘ಸ್ವಾಮೀಜಿ ಅವರ ಕಾನೂನು ಸಲಹೆಗಾರ ಧನಂಜಯ್ ಅವರು ವಿದ್ಯಾ ಅವರನ್ನು ಬೆಂಗಳೂರಿನ ಗಾಂಧಿ ನಗರದ ರಾಮಕೃಷ್ಣ ಹೋಟೆಲ್ ಬಳಿ ಭೇಟಿ ಮಾಡಿದ್ದರು. ಆಗ ಸ್ವಾಮೀಜಿ ಅವರಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೊಗಳಿದ್ದು, ಅದನ್ನು ಬಹಿರಂಗ ಪಡಿಸದೇ ಇರಲು ₹6 ಕೋಟಿಗೆ ಬೇಡಿಕೆ ಇಟ್ಟಿದ್ದರು. ತಕ್ಷಣವೇ ₹50 ಲಕ್ಷ ನೀಡಬೇಕು. ಹಣ ನೀಡದಿದ್ದರೆ ಅಶ್ಲೀಲ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಲಾಗುವುದೆಂದು ಬೆದರಿಕೆ ಒಡ್ಡಿದ್ದರು’ ಎಂದು ದೂರು ನೀಡಲಾಗಿದೆ.
‘ಸ್ವಾಮೀಜಿ ಅವರನ್ನೇ ಹೋಲುವಂತೆ ನಕಲಿ ಅಶ್ಲೀಲ ವಿಡಿಯೊ ಹಾಗೂ ಫೋಟೊಗಳನ್ನು ಸೃಷ್ಟಿಸಲಾಗಿದೆ’ ಎಂದು ಎಫ್‌ಐಆರ್ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.