ADVERTISEMENT

ಸಂಗೀತ ದೇಶದ ಭವ್ಯ ಪರಂಪರೆಯ ಭಾಗ: ರಾಜ್ಯಪಾಲ ಥಾವರಚಂದ್‌ ಗೆಹಲೋತ್

ಸಂಗೀತೋತ್ಸವದಲ್ಲಿ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 14:56 IST
Last Updated 29 ಜೂನ್ 2024, 14:56 IST
<div class="paragraphs"><p>ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ಪಂಡಿತ್ ವೆಂಕಟೇಶ ಕುಮಾರ್, ಭಾರತಿದೇವಿ ರಾಜಗುರು ಮತ್ತು ಪಂಡಿತ್ ವಿನಾಯಕ ತೊರವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.</p></div>

ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ಪಂಡಿತ್ ವೆಂಕಟೇಶ ಕುಮಾರ್, ಭಾರತಿದೇವಿ ರಾಜಗುರು ಮತ್ತು ಪಂಡಿತ್ ವಿನಾಯಕ ತೊರವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಪ್ರಾಚೀನ ಕಾಲದಿಂದಲೂ ಸಂಗೀತ ಮತ್ತು ನೃತ್ಯ ದೇಶದ ಭವ್ಯ ಪರಂಪರೆಯ ಭಾಗವಾಗಿವೆ’ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್ ತಿಳಿಸಿದರು. 

ADVERTISEMENT

ಸ್ವರ ಫೌಂಡೇಷನ್ ನಗರದಲ್ಲಿ ಶನಿವಾರ ಹಮ್ಮಿಕೊಂಡ ಸಂಗೀತೋತ್ಸವದಲ್ಲಿ ಭಾರತಿದೇವಿ ರಾಜಗುರು, ಪಂ. ವಿನಾಯಕ ತೊರವಿ ಹಾಗೂ ಪಂ. ವೆಂಕಟೇಶ ಕುಮಾರ್ ಅವರನ್ನು ಸನ್ಮಾನಿಸಿ, ಮಾತನಾಡಿದರು.

‘ಭಾರತೀಯ ಸಂಸ್ಕೃತಿಯಲ್ಲಿ ಜ್ಞಾನ, ವಿಜ್ಞಾನ, ಕಲೆ ಮತ್ತು ಸಂಗೀತ ಮಹತ್ವದ ಪಾತ್ರ ವಹಿಸುತ್ತದೆ. ದೇಶದಲ್ಲಿ ಸಂಗೀತದ ಹಲವು ಪ್ರಕಾರಗಳಿವೆ. ಇವುಗಳಲ್ಲಿ ಶಾಸ್ತ್ರೀಯ ಸಂಗೀತ ಪ್ರಮುಖವಾಗಿದೆ. ಸಂಗೀತ ಮತ್ತು ನೃತ್ಯವು ಪರಸ್ಪರ ಪೂರಕವಾಗಿವೆ. ಸಂಗೀತ ಮನುಷ್ಯನಿಗೆ ಆನಂದ ನೀಡುತ್ತದೆ. ಸಂಗೀತ ಮತ್ತು ನೃತ್ಯದ ಸಮ್ಮಿಲನವಾದಲ್ಲಿ ಭಾವಪರವಶರಾಗುತ್ತೇವೆ. ಕರ್ನಾಟಕದಲ್ಲಿ ಸಂಗೀತ ಮತ್ತು ಸಂಸ್ಕೃತಿಯನ್ನು ಆಧುನಿಕ ಜೀವನಶೈಲಿಯ ಜತೆಗೆ ಸುಂದರವಾಗಿ ಕೊಂಡೊಯ್ಯಲಾಗುತ್ತಿದೆ. ಸಂಗೀತವನ್ನು ಜೀವಂತವಾಗಿರಿಸಲು ಅನೇಕರು ಜೀವನವನ್ನು ಸಮರ್ಪಿಸಿದ್ದಾರೆ’ ಎಂದು ಸಂಗೀತ ಸಾಧಕರನ್ನು ಸ್ಮರಿಸಿಕೊಂಡರು 

ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ‘ಸಂಗೀತ ಮನುಷ್ಯನಿಗೆ ಅಮಲನ್ನು ತರುತ್ತದೆ. ಕುರಾನ್‌ನಲ್ಲಿ ಅಮಲು ತರುವ ವಸ್ತುವನ್ನು ನಿಷೇಧಿಸಲಾಗಿದೆ. ಆದ್ದರಿಂದ ಸಂಗೀತವನ್ನೂ ನಿಷೇಧಿಸುತ್ತೇನೆ ಎಂದು ಔರಂಗಜೇಬ್ ಸುಗ್ರೀವಾಜ್ಞೆ ಹೊರಡಿಸಿದ್ದ. ಸಂಗೀತ ಮನುಷ್ಯನ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ, ‘ಗುರು–ಶಿಷ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವುದು ಸಂಗೀತ’ ಎಂದು ತಿಳಿಸಿದರು. 

ಫೌಂಡೇಷನ್‌ನ ವ್ಯವಸ್ಥಾಪಕ ಟ್ರಸ್ಟಿ ಮುದ್ದು ಮೋಹನ್, ‘ಸವಾಯಿ ಗಂಧರ್ವರ ಪರಂಪರೆ ಹಾಗೂ ಪಂಚಾಕ್ಷರಿ ಗವಾಯಿ ಅವರ ಪರಂಪರೆ ಕರ್ನಾಟಕದಲ್ಲಿ ಭವ್ಯವಾದದ್ದಾಗಿದೆ. ಈ ಪರಂಪರೆಯಲ್ಲಿ ಅನೇಕ ಮಹನೀಯರು ಬಂದಿದ್ದಾರೆ. ಇವರು ಸ್ವರದ ಮೂಲಕ ಸಮಾಜ ಸುಧಾರಣೆ ಮಾಡಿದ್ದಾರೆ. ಸಂಗೀತದ ಭವ್ಯ ಪರಂಪರೆ ಮುಂದುವರಿಸುವುದು ನಮ್ಮ ಆಶಯವಾಗಿದೆ’ ಎಂದು ಹೇಳಿದರು.  

ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಘ್ ಹಾಗೂ ಸಾಹಿತಿ ಚಂದ್ರಶೇಖರ ಕಂಬಾರ ಅವರು ಫೌಂಡೇಷನ್‌ನ ಕಾರ್ಯವನ್ನು ಶ್ಲಾಘಿಸಿದರು. 

ಬಳಿಕ ಪಂ.ಶೈಲೇಶ ಭಾಗವತ್ ಅವರಿಂದ ಶಹನಾಯಿ ಹಾಗೂ ಉಸ್ತಾದ್ ರಫೀಕ್ ಖಾನ್ ಅವರಿಂದ ಸಿತಾರ್ ವಾದನ, ಮಾಳವಿಕಾ ನಾಯರ್ ಅವರಿಂದ ಭರತನಾಟ್ಯ, ಮುದ್ದು ಮೋಹನ್, ಪಂ. ವೆಂಕಟೇಶ ಕುಮಾರ್ ಅವರಿಂದ ಹಿಂದೂಸ್ಥಾನಿ ಗಾಯನ ನಡೆಯಿತು. ವಿಶ್ವನಾಥ ನಾಕೋಡ, ರಾಜೇಂದ್ರ ನಾಕೋಡ, ಕೇಶವ ಜೋಶಿ, ವ್ಯಾಸಮೂರ್ತಿ ಕಟ್ಟಿ ಹಾಗೂ ರವೀಂದ್ರ ಕಾಟೋಟಿ ವಾದ್ಯ ಸಹಕಾರ ನೀಡಿದರು.

ಯಾವುದೇ ಧರ್ಮಗ್ರಂಥ ತೆಗೆದುಕೊಂಡರು ಅವು ಕಾವ್ಯ ರೂಪದಲ್ಲಿವೆ. ಕಾವ್ಯಕ್ಕೆ ಮನುಷ್ಯನ ಮನಸ್ಸು–ಹೃದಯಕ್ಕೆ ಲಗ್ಗೆ ಹಾಕುವ ಶಕ್ತಿಯಿದೆ.
–ಕೃಷ್ಣ ಎಸ್. ದೀಕ್ಷಿತ್, ಹೈಕೋರ್ಟ್‌ ನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.