ADVERTISEMENT

ಹೊಸ ಬೆಳಕು: ಎಂ.ಟೆಕ್ ಪದವೀಧರನಿಂದ ‘ಸ್ವೀಪ್‌ ಈಝಿ’

ಪೌರಕಾರ್ಮಿಕರ ಶ್ರಮ ತಗ್ಗಿಸುವ ಮಾನವ ಚಾಲಿತ ಯಂತ್ರ

ಮನೋಹರ್ ಎಂ.
Published 23 ಫೆಬ್ರುವರಿ 2022, 20:31 IST
Last Updated 23 ಫೆಬ್ರುವರಿ 2022, 20:31 IST
ಸ್ವೀಪ್‌ ಈಸಿ ಯಂತ್ರ
ಸ್ವೀಪ್‌ ಈಸಿ ಯಂತ್ರ   

ಬೆಂಗಳೂರು: ಪೌರಕಾರ್ಮಿಕರ ಶ್ರಮ ತಗ್ಗಿಸುವ ಮೂಲಕನಗರಗಳನ್ನು ಮತ್ತಷ್ಟು ಸ್ವಚ್ಛವಾಗಿಡುವ ಆಶಯದೊಂದಿಗೆ ಎಂ.ಟೆಕ್ ಪದವೀಧರ ಪ್ರಕಾಶ್‌ ಹೊಸದುರ್ಗ ಅವರು ‘ಸ್ವೀಪ್‌ ಈಝಿ’ ಹೆಸರಿನ ಮಾನವ ಚಾಲಿತ ಸರಳ ಯಂತ್ರವನ್ನು ಶೋಧಿಸಿದ್ದಾರೆ.

ಪೌರಕಾರ್ಮಿಕರು ಕೈಯಲ್ಲಿ ಪೊರಕೆ ಹಿಡಿಯದೆ, ಈ ಸಾಧನ ತಳ್ಳುತ್ತಾ ಸಾಗಿದರೆ ಸಾಕು. ರಸ್ತೆಯಲ್ಲಿರುವ ಎಲ್ಲ ರೀತಿಯ ಕಸವನ್ನು ಈ ಯಂತ್ರ ಸ್ವಚ್ಛಗೊಳಿಸುತ್ತದೆ. ಇದಕ್ಕೆ ಯಾವುದೇ ಇಂಧನದ ಅವಶ್ಯಕತೆಯೂ ಇಲ್ಲ.

ರಸ್ತೆಗಳಲ್ಲಿ ಬಿದ್ದಿರುವ ಕಸವನ್ನು ಪೌರ ಕಾರ್ಮಿಕರು ಪ್ರತಿ ನಿತ್ಯ ಶ್ರಮ ವಹಿಸಿ ಸ್ವಚ್ಛಗೊಳಿಸುತ್ತಾರೆ. ಬಾಗಿ ಕಸ ಗುಡಿಸುವ ಬದಲಿಗೆ ಈ ಯಂತ್ರದೊಂದಿಗೆ ನಡೆಯುತ್ತಲೇ ಕಸ ಸ್ವಚ್ಛ ಮಾಡುವುದು ಈ ಯಂತ್ರದ ವಿಶೇಷ.

ADVERTISEMENT

ಧಾರವಾಡದಪ್ರಕಾಶ್‌ ಹೊಸದುರ್ಗ, ವಿದೇಶದಲ್ಲಿ ಕೆಲಕಾಲ ಕೆಲಸ ಮಾಡಿ, ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ‘ಐ ಕ್ಲೀನ್‌ ಎಕ್ಸ್‌’ ಬ್ರ್ಯಾಂಡ್‌ ಹೆಸರಿನಲ್ಲಿ ವಿವಿಧ ಮಾದರಿಯ ಯಂತ್ರಗಳನ್ನು ಹೊರತಂದಿರುವ ಇವರು‘ಟ್ರಯಾಂಗಲ್ ಇನ್ನೋವೇಷನ್ಸ್‌ ಪ್ರೈವೇಟ್‌ ಲಿಮಿಟೆಡ್‌’ ಎಂಬ ನವೋದ್ಯಮದ ಸಂಸ್ಥಾಪಕ.

‘ಕಲಿತ ಶಿಕ್ಷಣ ಜನರಿಗೆ ನೆರವಾಗಬೇಕು. ಈ ಉದ್ದೇಶದಿಂದಲೇ ವಿದೇಶದಿಂದ ಮತ್ತೆ ತಾಯ್ನಾಡಿಗೆ ಬಂದೆ. ಪ್ರತಿ ನಿತ್ಯ ಅಗಾಧ ಪ್ರಮಾಣದಲ್ಲಿ ಕಸ ಬಿದ್ದಿರುತ್ತದೆ. ಅದನ್ನು ಸ್ವಚ್ಛಗೊಳಿಸುವವರು ಪೌರಕಾರ್ಮಿಕರು. ಕಸ ಸ್ವಚ್ಛಗೊಳಿಸಲು ಇವರೆಲ್ಲ ಪ್ರತಿದಿನ ಶ್ರಮ ಪಡುತ್ತಾರೆ. ಈ ಮಾನವ ಚಾಲಿತ ಯಂತ್ರ ಸಿದ್ಧಪಡಿಸಲುಪೌರಕಾರ್ಮಿಕರೇ ಪ್ರೇರಣೆಯಾದರು’ ಎಂದುಪ್ರಕಾಶ್‌ ಹೊಸದುರ್ಗ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೌರಕಾರ್ಮಿಕರ ಕೈಗೆ ಪೊರಕೆ ಬದಲಿಗೆ ಈ ಯಂತ್ರ ನೀಡುವುದು ನಮ್ಮ ಉದ್ದೇಶ. ಕೋವಿಡ್‌ ಸಮಯದಲ್ಲಿ ಈ ಯಂತ್ರವನ್ನು ಅಭಿವೃದ್ಧಿಪಡಿಸಿ, ಕಳೆದ ಜನವರಿಯಲ್ಲಿ ಅಂತಿಮ ರೂಪ ನೀಡಿದೆ. ಕೈಯಿಂದ ಗುಡಿಸುವುದಕ್ಕೆ ಹೋಲಿಸಿದರೆ ಈಯಂತ್ರ 10 ಪಟ್ಟು ವೇಗವಾಗಿ ಕೆಲಸ ಮಾಡುತ್ತದೆ. ಇದರಿಂದ ಅವರ ಶ್ರಮ ಕಡಿಮೆಯಾಗುತ್ತದೆ’ ಎಂದರು.

‘ರಸ್ತೆಗಳಲ್ಲಿ ಬಿದ್ದಿರುವ ಎಲೆಗಳು, ಪೇಪರ್‌ಗಳು, ಮಣ್ಣು, ಪ್ಲಾಸ್ಟಿಕ್‌ ವಸ್ತುಗಳು ಸೇರಿದಂತೆ ಎಲ್ಲ ರೀತಿಯ ಕಸವನ್ನು ಈ ಯಂತ್ರ ಸಂಗ್ರಹಿಸಿಕೊಳ್ಳುತ್ತದೆ. ಇದಕ್ಕಾಗಿ ಯಂತ್ರದಲ್ಲೇ ಕಸದ ಬುಟ್ಟಿ ಅಳವಡಿಸಲಾಗಿದೆ.‌ ಯಂತ್ರವನ್ನು ತಳ್ಳುತ್ತಾ ಸಾಗಿದರೆ ಕಸ ಸ್ವಚ್ಛ ಹಾಗೂ ಸಂಗ್ರಹದ ಕೆಲಸ ಏಕಕಾಲಕ್ಕೆ ನಡೆಯುತ್ತದೆ. ಗಟ್ಟಿಯಾದ ರಬ್ಬರ್‌ನಿಂದ ತಯಾರಾದ ಚಕ್ರಗಳನ್ನು ಅಳವಡಿಸಿರುವುದರಿಂದ ಪಂಚರ್‌ ಆಗುವುದಿಲ್ಲ. ಯಂತ್ರದ ಮುಂಭಾಗದಲ್ಲಿ ಅಳವಡಿಸಿರುವ ಬ್ರಷ್‌ಗಳು ಕಸ ಸಂಗ್ರಹಿಸಲು ನೆರವಾಗುತ್ತವೆ’ ಎಂದು ವಿವರಿಸಿದರು. ‘ಸದ್ಯ3 ಅಡಿ (10 ಕೆ.ಜಿ) ಹಾಗೂ 4 ಅಡಿಯ (18 ಕೆ.ಜಿ) ಯಂತ್ರಗಳು ಲಭ್ಯ.ಸಣ್ಣ, ಮಧ್ಯಮ ಹಾಗೂ ದೊಡ್ಡ ಗಾತ್ರದ ಮೂರು ಯಂತ್ರಗಳನ್ನು ಸಿದ್ಧಪಡಿಸಿದ್ದೇವೆ. ಯಂತ್ರಗಳ ಬೆಲೆ ₹15 ಸಾವಿರದಿಂದ ₹40 ಸಾವಿರ. ಅಗತ್ಯಕ್ಕೆ ತಕ್ಕ ಪ್ರಮಾಣದ ಯಂತ್ರವನ್ನು ಬಳಸಬಹುದು. ಸ್ವಚ್ಛತಾ ಉದ್ಯಮಕ್ಕೆ ಅನುಕೂಲವಾಗುವಂತೆ ಇನ್ನೂ ಒಂಬತ್ತು ಯಂತ್ರಗಳ ಅಭಿವೃದ್ಧಿ ಪ್ರಗತಿಯಲ್ಲಿದೆ’ ಎಂದರು.

ಎಲ್ಲೆಲ್ಲಿ ಬಳಸಬಹುದು?

*ನಗರಸಭೆ–ಪುರಸಭೆ

*ಶಾಲಾ–ಕಾಲೇಜುಗಳು

*ಪಾರ್ಕಿಂಗ್‌ ಸ್ಥಳಗಳು

*ಅಪಾರ್ಟ್‌ಮೆಂಟ್‌ ಸಮುಚ್ಚಯಗಳು

*ಪೆಟ್ರೋಲ್‌ ಬಂಕ್‌

*ಮಾಲ್‌ಗಳು

*ಆಸ್ಪತ್ರೆ

*ರಸ್ತೆಗಳು

ಸಾವಿರಕ್ಕೂ ಹೆಚ್ಚು ಯಂತ್ರಗಳಿಗೆ ಬೇಡಿಕೆ

‘ಗುಂಡ್ಲುಪೇಟೆ, ಕೆ.ಜಿ.ಎಫ್‌, ಚಾಮರಾಜನಗರ, ಬಂಗಾರಪೇಟೆಯ ಸ್ಥಳೀಯ ಸಂಸ್ಥೆಗಳು ನಮ್ಮ ‘ಸ್ವೀಪ್‌ ಈಝಿ’ ಯಂತ್ರಗಳನ್ನು ಬಳಸುತ್ತಿವೆ. ಶಿರಾ, ತಿಪಟೂರು, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಚಿಂತಾಮಣಿ, ಕೊಳ್ಳೇಗಾಲ, ಮೈಸೂರು, ತುಮಕೂರು ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳು ಈ ಯಂತ್ರಕ್ಕೆ ಬೇಡಿಕೆ ಇಟ್ಟಿವೆ. ಒಂದು ಸಾವಿರಕ್ಕೂ ಹೆಚ್ಚು ಯಂತ್ರಗಳನ್ನು ಖರೀದಿಸಲು ವಿವಿಧ ನಗರ ಸಭೆಗಳು ಹಾಗೂ ಪುರಸಭೆಗಳು ಮುಂದಾಗಿವೆ’ ಎಂದು ಪ್ರಕಾಶ್‌ ಮಾಹಿತಿ ನೀಡಿದರು.

‘ಬೆಂಗಳೂರಿನ ದೊಡ್ಡ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲೂ ನಮ್ಮ ಯಂತ್ರವನ್ನು ಬಳಸಲಾಗಿದ್ದು, ಅವರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ 4 ಯಂತ್ರಗಳನ್ನು ಬಳಸುತ್ತಿದ್ದಾರೆ. ಬಿಬಿಎಂಪಿ ಸುಮಾರು 800 ಯಂತ್ರಗಳನ್ನು ಖರೀದಿಸಲು ಒಲವು ತೋರಿದ್ದು, ಈ ಬಗ್ಗೆ ಮಾತುಕತೆ ನಡೆಯುತ್ತಿದೆ’ ಎಂದರು.

ಸಂಸ್ಥೆಯ ವಿಳಾಸ: ಟ್ರಯಾಂಗಲ್ ಇನ್ನೋವೇಷನ್ಸ್‌ ಪ್ರೈವೇಟ್‌ ಲಿಮಿಟೆಡ್‌, ಎಂಆರ್‌ಎಸ್‌ ಬಡಾವಣೆ, ಟೆಲಿಕಾಂ ಬಡಾವಣೆ ರಸ್ತೆ, ಸುಂಕದಕಟ್ಟೆ, ಬೆಂಗಳೂರು. ಸಂಪರ್ಕ: 9900565857 ಅಥವಾ www.icleanx.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.