ADVERTISEMENT

ರೈಲ್ವೆ: ವರ್ಷದಲ್ಲಿ 1100 ಮಕ್ಕಳ ರಕ್ಷಣೆ

‘ನನ್ನೆ ಫರಿಷ್ತೆ’ ಹೆಸರಿನಲ್ಲಿ ನಡೆಸಿದ್ದ ವಿಶೇಷ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2018, 19:42 IST
Last Updated 30 ಜುಲೈ 2018, 19:42 IST

ಬೆಂಗಳೂರು: ಮಾನವ ಕಳ್ಳಸಾಗಣೆ ತಡೆಯಲು ಹಾಗೂ ಕಳೆದುಹೋದ ಮಕ್ಕಳನ್ನು ಪತ್ತೆ ಹಚ್ಚುವ ಸಲುವಾಗಿ ನೈರುತ್ಯ ರೈಲ್ವೆಯ ‘ನನ್ನೆ ಫರಿಷ್ತೆ’ (ಪುಟಾಣಿ ದೇವದೂತರು) ಹೆಸರಿನಲ್ಲಿ ನಡೆಸಿದ್ದ ವಿಶೇಷ ಕಾರ್ಯಾಚರಣೆಯಲ್ಲಿ ಒಂದು ವರ್ಷದಲ್ಲಿ ಒಟ್ಟು 1,100 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.

ರೈಲ್ವೆ ರಕ್ಷಣಾ ದಳದ ಬೆಂಗಳೂರು ವಿಭಾಗದ ಭದ್ರತಾ ಆಯುಕ್ತರಾದ ದೇಬಶ್ಮಿತಾ ಚಟ್ಟೊಪಾಧ್ಯಾಯ ಬ್ಯಾನರ್ಜಿ, ‘‌ಮಕ್ಕಳು ಸೇರಿ ಇಲ್ಲಿಯವರೆಗೆ 2000 ಜನರನ್ನು ರಕ್ಷಿಸಿದ್ದೇವೆ. ಎನ್‌ಜಿಒ ಸಹಾಯದಿಂದ ಅವರಿಗೆ ಪುನರ್‌ವಸತಿ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

‘ಸಾರ್ವಜನಿಕರ ಸಹಕಾರ ಹೆಚ್ಚು ಅಗತ್ಯ. ರೈಲ್ವೆ ಪ್ಲಾಟ್‌ಫಾರಂನಲ್ಲಿ ಮಕ್ಕಳು ನಡವಳಿಕೆ ಬಗ್ಗೆ ಅನುಮಾನ ಬಂದರೆ, ತಕ್ಷಣ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಈ ಕಾರ್ಯಾಚರಣೆಯಿಂದ ಮಾನವ ಕಳ್ಳಸಾಗಣೆ ಬಗ್ಗೆ ತಿಳಿಯಲು ಸಾಧ್ಯವಾಯಿತು. ಕೆಲವೊಂದು ರೈಲು ಹಾಗೂ ನಿರ್ದಿಷ್ಟ ಸಮಯದಲ್ಲಿ ಈ ರೀತಿಯ ಚಟುವಟಿಕೆಗಳು ಹೆಚ್ಚಾಗಿರುತ್ತವೆ. ಪರೀಕ್ಷೆ ಸಮಯದಲ್ಲಿ ಈ ರೀತಿಯ ಜಾಲಕ್ಕೆ ಸಿಲುಕುವವರ ಸಂಖ್ಯೆ ಹೆಚ್ಚು’ ಎಂದು ವಿವರಿಸಿದರು.

ನಗರದ ಕೆಂಪೇಗೌಡ ರೈಲು ನಿಲ್ದಾಣದಲ್ಲಿ ಈ ಕುರಿತು ಸೋಮವಾರ ಇಂಟರ್‌ನ್ಯಾಷನಲ್‌ ಜಸ್ಟೀಸ್‌ ಮಿಷನ್ (ಐಜೆಎಂ) ಎನ್‌ಜಿಒ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನದಲ್ಲಿ ಅಧಿಕಾರಿಗಳು ಪಾಲ್ಗೊಂಡಿದ್ದರು.

ಐಜೆಎಂ ಸಹಾಯಕ ನಿರ್ದೇಶಕಿ ಎಂ.ಪ್ರತೀಮಾ, ‘ಈ ನಗರದಲ್ಲಿ ಜೀತಕ್ಕಿರುವ ಸಾಕಷ್ಟು ಮಕ್ಕಳನ್ನು ರೈಲಿನ ಮೂಲಕವೇ ಕರೆತರಲಾಗುತ್ತದೆ. ಈ ಸಂತ್ರಸ್ತ ಮಕ್ಕಳಲ್ಲಿ ಬಹುತೇಕರು ಬಿಹಾರ, ಜಾರ್ಖಂಡ್, ಒಡಿಶಾ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಮೂಲದವರಾಗಿದ್ದಾರೆ. ಉತ್ತಮ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಬರಲಾಗುತ್ತದೆ’ ಎಂದರು.

‘ಕೃಷಿ ಬಿಕ್ಕಟ್ಟಿನಿಂದ ಲಕ್ಷಾಂತರ ಸಂಖ್ಯೆಯ ಜನ ನಗರಕ್ಕೆ ವಲಸೆ ಬರುತ್ತಿದ್ದಾರೆ. ನಗರ ಕೊಳಗೇರಿಗಳಲ್ಲಿ ವಾಸಿಸುವ ಅವರನ್ನು ಜೀತಕ್ಕೆ ಇಟ್ಟುಕೊಳ್ಳಲಾಗುತ್ತಿದೆ’ ಎನ್ನುವ ವಿಷಯದ ಕುರಿತು ‘ನೆಮ್ಮದಿ’ ತಂಡ ಬೀದಿ ನಾಟಕ ಪ್ರದರ್ಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.