ADVERTISEMENT

ವಂಚನೆ: ಬಡ್ಡಿ ಸಹಿತ ₹48 ಕೋಟಿ ಹಿಂತಿರುಗಿಸಿದ ಸಿಂಡಿಕೇಟ್‌ ಬ್ಯಾಂಕ್‌

ಸಿಂಡಿಕೇಟ್‌ ಬ್ಯಾಂಕ್‌ ಆವರ್ತನಿಧಿ ವಂಚನೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 22:11 IST
Last Updated 29 ಏಪ್ರಿಲ್ 2020, 22:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿದ್ದ ಆವರ್ತ ನಿಧಿಯಲ್ಲಿ ನಡೆದಿತ್ತು ಎನ್ನಲಾದ ವಂಚನೆ ಪ್ರಕರಣ ಅಂತ್ಯಗೊಂಡಿದ್ದು ₹ 48 ಕೋಟಿ ಹಣವನ್ನು ಬ್ಯಾಂಕ್‌ ಬಡ್ಡಿ ಸಹಿತ ಹಿಂತಿರುಗಿಸಿದೆ.

ರಾಜಾಜಿನಗರದ ಆಂಧ್ರ ಬ್ಯಾಂಕಿನಲ್ಲಿ ಇಡಲಾಗಿದ್ದ ಠೇವಣಿಯನ್ನು ಹೆಚ್ಚಿನ ಬಡ್ಡಿ ಪಡೆಯುವ ಉದ್ದೇಶದಿಂದ ಸಿಂಡಿಕೇಟ್‌ ಬ್ಯಾಂಕ್‌ ಉತ್ತರಹಳ್ಳಿ ಶಾಖೆ ಹಾಗೂ ಬ್ಯಾಂಕ್‌ ಆಫ್‌ ಇಂಡಿಯಾ ವಿ.ವಿ ಪುರಂ ಶಾಖೆಗೆ 2019ರ ನವೆಂಬರ್‌ 18ರಂದು ವರ್ಗಾವಣೆ ಮಾಡಲಾಗಿತ್ತು.

ಸಿಂಡಿಕೇಟ್‌ ಬ್ಯಾಂಕಿನಲ್ಲಿ ಇಡಲಾಗಿದ್ದ ₹ 100 ಕೋಟಿ ನಿಶ್ಚಿತ ಠೇವಣಿಯಲ್ಲಿ ₹ 48 ಕೋಟಿ ವಂಚನೆಯಾಗಿದೆ ಎಂದು ಆರೋಪಿಸಿ ಜನವರಿ 21ರಂದು ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸರಿಗೆ ದೂರು ನೀಡಲಾಯಿತು. ಮರುದಿನ ಈ ಸಂಬಂಧ ಎಫ್‌ಐಆರ್‌ ದಾಖಲಾಯಿತು. ಆನಂತರ, ಪ್ರಕರಣ ಸಿಸಿಬಿಗೆ ಹಸ್ತಾಂತರವಾಯಿತು.

ADVERTISEMENT

ಈ ಮಧ್ಯೆ, ವಂಚನೆಯಾಗಿರುವ ಹಣ ಮರಳಿಸುವಂತೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಬ್ಯಾಂಕ್‌ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು. ಇದರ ನಡುವೆಯೇ ಮಾರ್ಚ್‌ 31ರಂದು ಸಿಂಡಿಕೇಟ್‌ ಬ್ಯಾಂಕ್‌ ಕೆನರಾ ಬ್ಯಾಂಕ್‌ನಲ್ಲಿ ವಿಲೀನವಾಯಿತು.

ಬ್ಯಾಂಕ್‌ ಏಪ್ರಿಲ್‌ 3ರಂದು ₹50.52 ಕೋಟಿ ಮತ್ತು ಏಪ್ರಿಲ್‌ 22ರಂದು ₹50.85 ಕೋಟಿ ಹಣವನ್ನು ಆವರ್ತನಿಧಿ ಖಾತೆಗೆ ಹಿಂತಿರುಗಿಸಿದೆ. ₹1.37 ಕೋಟಿ ಬಡ್ಡಿ ಇದರಲ್ಲಿ ಸೇರಿದೆ. ಬ್ಯಾಂಕ್‌ನಲ್ಲಿ ಆವರ್ತನಿಧಿ ಸುರಕ್ಷಿತವಾಗಿದೆ ಎಂದು ಕೃಷಿ ಮಾರಾಟ ಇಲಾಖೆ ನಿರ್ದೇಶಕ ಮತ್ತು ಕೃಷಿಮಾರಾಟ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಕರಿಗೌಡ ತಿಳಿಸಿದ್ದಾರೆ.

₹48 ಕೋಟಿ ಹೇಗೆ ವಂಚನೆಯಾಗಿತ್ತು. ಇದರಲ್ಲಿ ಯಾರ ಕೈವಾಡವಿತ್ತು. ಈ ಬಗ್ಗೆ ಬ್ಯಾಂಕ್‌ ವಿಚಾರಣೆ ನಡೆಸುತ್ತಿದೆಯೇ ಅಥವಾ ಪೊಲೀಸ್‌ ತನಿಖೆ ಏನಾಯಿತು ಎಂಬ ಮಾಹಿತಿಯನ್ನು ಕರಿಗೌಡರು ನೀಡಿಲ್ಲ. ಹೆಚ್ಚಿನ ಮಾಹಿತಿಗೆ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.