ADVERTISEMENT

BMTC ನೌಕರರ ಮೇಲೆ ಹಲ್ಲೆ: ಕಠಿಣ ಕ್ರಮಕ್ಕೆ ರಾಮಲಿಂಗಾರೆಡ್ಡಿ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 15:39 IST
Last Updated 28 ಅಕ್ಟೋಬರ್ 2024, 15:39 IST
BMTC bus
BMTC bus   

ಬೆಂಗಳೂರು: ಬಿಎಂಟಿಸಿ ಬಸ್‌ ಚಾಲಕರು ಮತ್ತು ನಿರ್ವಾಹಕರ ಮೇಲೆ ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ತಪ್ಪು ಎಸಗಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಬಸ್‌ ಸಿಬ್ಬಂದಿ ಸುರಕ್ಷಿತವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ಪೊಲೀಸ್‌ ಕಮಿಷನರ್‌ ಅವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಿರ್ದೇಶನ ನೀಡಿದ್ದಾರೆ.

ಪೊಲೀಸ್ ಕಮಿಷನರ್ ಬಿ. ದಯಾನಂದ ಅವರಿಗೆ ಪತ್ರ ಬರೆದಿರುವ ಸಚಿವರು, ‘ಅಕ್ಟೋಬರ್‌ ತಿಂಗಳಲ್ಲಿ ಮೂರು ಪ್ರಕರಣಗಳು ನಡೆದಿವೆ. ಸುರಕ್ಷತೆಯ ದೃಷ್ಟಿಯಿಂದ ಬಾಗಿಲಲ್ಲಿ ನಿಲ್ಲದೇ ಒಳಗೆ ಬರುವಂತೆ ಸೂಚಿಸಿದ್ದಕ್ಕಾಗಿ ಪ್ರಯಾಣಿಕ ಹರ್ಷ ಸಿನ್ಹಾ ಅ.1ರಂದು ಐಟಿಪಿಎಲ್‌ ಬಸ್‌ ತಂಗುದಾಣದ ಬಳಿ ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ್ದರು. ಅ.18ರಂದು ಮಧ್ಯಾಹ್ನ ಊಟ ಮಾಡುತ್ತಿದ್ದ ಬಿಎಂಟಿಸಿ ಬಸ್‌ ನಿರ್ವಾಹಕನಿಗೆ ಹೇಮಂತ್‌ ಎಂಬಾತ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿದ್ದ. ಅ.26ರಂದು ಟ್ಯಾನರಿ ರಸ್ತೆಯ ಕೆನರಾ ಬ್ಯಾಂಕ್‌ ಬಸ್‌ ತಂಗುದಾಣದಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಚಾಲಕ ಮತ್ತು ನಿರ್ವಾಹಕರಿಗೆ ಹಲ್ಲೆ ನಡೆಸಿದ್ದರು’ ಎಂದು ತಿಳಿಸಿದ್ದಾರೆ.

ಈ ರೀತಿಯ ಪ್ರಕರಣಗಳು ಮರುಕಳಿಸುವುದರಿಂದ ಸಂಸ್ಥೆಯ ನೌಕರರು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಗಮನ ಹರಿಸಬೇಕು. ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಬೇಕು ಎಂದು ಕೋರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.