ಬೆಂಗಳೂರು: ಕೋವಿಡ್‌ನಂತಹ ಸಾಂಕ್ರಾಮಿಕ ರೋಗ ಎಲ್ಲೆಡೆ ಹರಡಿರುವ ಸಂದರ್ಭದಲ್ಲೂ ಪೌರಕಾರ್ಮಿಕರು ನಗರವನ್ನು ಸ್ವಚ್ಛವಾಗಿಡಲು ಪ್ರಾಣವನ್ನೇ ಪಣವಾಗಿಟ್ಟು ಶ್ರಮ ವಹಿಸುತ್ತಿದ್ದಾರೆ. ಅವರ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸಫಾಯಿ ಕರ್ಮಾಚಾರಿ ಆಯೋಗವು ಬಿಬಿಎಂಪಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಕೋವಿಡ್ ಸಂದರ್ಭದಲ್ಲಿ ಪೌರಕಾರ್ಮಿಕರ ಆರೋಗ್ಯ ಸಂರಕ್ಷಣೆಗೆ ಬಿಬಿಎಂಪಿ ಕೈಗೊಂಡ ಕ್ರಮಗಳ ಬಗ್ಗೆ ಆಯೋಗದ ಅಧ್ಯಕ್ಷ ಎಂ.ಶಿವಣ್ಣ (ಕೋಟೆ) ಅವರು ಮಂಗಳವಾರ ಪರಿಶೀಲನೆ ನಡೆಸಿದರು.
‘ಪೌರಕಾರ್ಮಿಕರ ಆರೋಗ್ಯ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳದ ಪರಿಸರ ಎಂಜಿನಿಯರ್ ಹಾಗೂ ಆರೋಗ್ಯ ಅಧಿಕಾರಿಗಳಿಗೆ ದಂಡ ಹಾಕಬೇಕು. ಕಸ ನಿರ್ವಹಣೆಯ ಗುತ್ತಿಗೆದಾರರು ಪೌರಕಾರ್ಮಿಕರ ಆರೋಗ್ಯ ಕಡೆಗಣಿಸಿದರೆ ಅವರ ಗುತ್ತಿಗೆ ರದ್ದುಪಡಿಸಬೇಕು’ ಎಂದು ಸೂಚನೆ ನೀಡಿದರು.
ಪೌರಕಾರ್ಮಿಕರು ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸಕ್ಕೆ ಹಾಜರಾಗಲು ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಅಧಿಕಾರಿಗಳ ಗಮನ ಸೆಳೆದ ಆಯೋಗದ ಅಧ್ಯಕ್ಷರು, ‘18 ಸಾವಿರ ಪೌರಕಾರ್ಮಿಕರ ಸಂಚಾರಕ್ಕೆ ಕೇವಲ 60 ಬಿಎಂಟಿಸಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಸಾಲದು. ಕೆಲಸದ ಸ್ಥಳಕ್ಕೆ ಹೋಗಲು ಅವರಿಗೆ ರಿಕ್ಷಾ ಕೂಡಾ ಸಿಗುತ್ತಿಲ್ಲ. ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿ’ ಎಂದು ಸಲಹೆ ನೀಡಿದರು.
‘ಶೇ 70ರಷ್ಟು ಪೌರಕಾರ್ಮಿಕರಿಗೆ ಲಸಿಕೆ ಹಾಕಲಾಗಿದೆ. ಕೆಲವರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವುದರ ಮಹತ್ವದ ಬಗ್ಗೆ ಹಾಗೂ ಸುರಕ್ಷತಾ ಪರಿಕರಗಳನ್ನು ಧರಿಸುವುದರ ಅಗತ್ಯದ ಬಗ್ಗೆ ಮಸ್ಟರಿಂಗ್ ಕೇಂದ್ರಗಳಲ್ಲಿ ಅವರಿಗೆ ಅರ್ಧ ಗಂಟೆ ಜಾಗೃತಿ ಮೂಡಿಸಬೇಕು. ಕೆಲಸ ಆರಂಭಿಸುವ ಮುನ್ನ ಅವರ ದೇಹದ ಉಷ್ಣಾಂಶ ತಪಾಸಣೆ ಮಾಡಬೇಕು. ಮಾಸ್ಕ್, ಕೈಗವಸು, ಸ್ಯಾನಿಟೈಸರ್, ಕೊರೊನಾ ತಡೆಯಲು ಅಗತ್ಯವಿರುವ ಔಷಧಿ, ಕುಡಿಯುವ ನೀರನ್ನು ಒಳಗೊಂಡ ಕಿಟ್‌ಗಳನ್ನು ಅವರಿಗೆ ನೀಡಬೇಕು’ ಎಂದು ಸೂಚಿಸಿದರು.
‘ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೆ 14 ಪೌರಕಾರ್ಮಿಕರು ಕೋವಿಡ್‌ನಿಂದ ಸತ್ತಿದ್ದಾರೆ. ಬಿಬಿಎಂಪಿಯಿಂದ ಕೊಡಬೇಕಾದ ಪರಿಹಾರ ನೀಡಬೇಕು. ಬೆಳಿಗ್ಗೆ 6.30ರಿಂದ 10.30 ವರೆಗೆ ಕೆಲಸ ಮಾಡುವ ಅವರಿಗೆ ಊಟ ಮತ್ತು ಉಪಾಹಾರದ ವ್ಯವಸ್ಥೆ ಕಲ್ಪಿಸಬೇಕು’ ಎಂದರು.
ಬಿಬಿಎಂಪಿ ವಿಶೇಷ ಆಯುಕ್ತ ಕೆ.ಎ.ದಯಾನಂದ, ಜಂಟಿ ಆಯುಕ್ತ ಸರ್ಫರಾಜ್ ಖಾನ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.