ಬೆಂಗಳೂರು: ಇಂದಿರಾನಗರ ಪುನರುತ್ಥಾನ ಚರ್ಚ್‌ನ ನಾಮಫಲಕದಜತೆ ಇದ್ದಕ್ಕಿದ್ದಂತೆ ಸೇರ್ಪಡೆಗೊಳಿಸಿದ್ದ ತಮಿಳು ಭಾಷೆಯ ಫಲಕವನ್ನು ಕನ್ನಡಪರ ಸಂಘಟನೆಗಳ ಹೋರಾಟದ ಬಳಿಕ ಶನಿವಾರ ರಾತ್ರಿ ತೆರವುಗೊಳಿಸಲಾಯಿತು.
ಕನ್ನಡ ಮತ್ತು ಇಂಗ್ಲಿಷ್‌ನಲ್ಲಿದ್ದ ಚರ್ಚ್‌ನ ಫಲಕಗಳ ಜತೆಗೆ ಕಳೆದ ವಾರ ತಮಿಳು ಭಾಷೆಯ ಫಲಕವೂ ಸೇರಿಕೊಂಡಿತ್ತು. ಇದನ್ನು ತೆರವುಗೊಳಿಸು
ವಂತೆಇಂಡಿಯನ್ ಕ್ರಿಶ್ಚಿಯನ್ ಯುನೈಟೆಡ್ ಫೋರಂ ಅಧ್ಯಕ್ಷ ಟಿ.ಜೆ. ಅಬ್ರಹಾಂ ಪೊಲೀಸರಿಗೆ ದೂರು ನೀಡಿದ್ದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿದ್ಧರಾಮಯ್ಯ,ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಒತ್ತಡ ಹೇರಿದ ಬಳಿಕ ಪೊಲೀಸರೇ ಅದನ್ನು ತೆರವುಗೊಳಿಸಿದ್ದರು. ಅದಾದ ಎರಡು ದಿನಗಳಲ್ಲಿ ಮತ್ತೆ ಅದೇ ಸ್ಥಳದಲ್ಲಿ ತಮಿಳು ಭಾಷೆ ಒಳಗೊಂಡ ಮತ್ತೊಂದು ಫಲಕ ತಲೆ ಎದ್ದಿತ್ತು. ಇದರಿಂದ ಆಕ್ರೋಶಗೊಂಡ ಕನ್ನಡ ಒಕ್ಕೂಟದ ನಾಗೇಶ್, ಕರವೇ ಪ್ರವೀಣ್‌ಕುಮಾರ್ ಶೆಟ್ಟಿ, ಜಯಕರ್ನಾಟಕ ಸಂಘಟನೆ ಮುಖಂಡರು, ಕೂಡಲೇ ಫಲಕ ತೆರವುಗೊಳಿಸಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆಗೆ ಮುಂದಾದರು.
‘ಪಾದ್ರಿ ಸಾಲೊಮನ್ ಅವರು ಬೇರೆ ಚರ್ಚೆಗೆ ವರ್ಗಾವಣೆಯಾಗಿದ್ದಾರೆ. ಇಲ್ಲಿಂದ ಹೋಗುವ ಮೊದಲು ಬೇಕೆಂದೇ ವಿವಾದ ಹುಟ್ಟು ಹಾಕಿದ್ದಾರೆ. ಕೂಡಲೇ ಪರಿಸ್ಥಿತಿ ತಿಳಿಗೊಳಿಸದೆ ಇದ್ದರೆ ಕೋಮು ಗಲಭೆಗೆ ಕಾರಣವಾಗಬಹುದು ಎಂದುಬಿಷಪ್ ಅವರಿಗೆ ಪತ್ರ ಬರೆದು ತಿಳಿಸಿದ್ದೆ’ ಎಂದು ಟಿ.ಜೆ. ಅಬ್ರಹಾಂ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೊನೆಗೂ ಪರಿಸ್ಥಿತಿ ಹದಗೆಡುವುದನ್ನು ಅರಿತ ಬಿಷಪ್ ಅವರು ಶನಿವಾರ ರಾತ್ರಿ ಚರ್ಚೆಗೆ ಬಂದು ತಡರಾತ್ರಿ ಫಲಕವನ್ನು ತೆರವುಗೊಳಿಸಲು ಸೂಚಿಸಿದರು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.