ADVERTISEMENT

ವೈದ್ಯರ ಸುರಕ್ಷತೆಗೆ ಕಾರ್ಯಪಡೆ: ಸಚಿವ ದಿನೇಶ್‌ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2024, 19:28 IST
Last Updated 20 ಆಗಸ್ಟ್ 2024, 19:28 IST
   

ಬೆಂಗಳೂರು: ರಾಜ್ಯದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ  ರಕ್ಷಣೆ ನೀಡುವ ಉದ್ದೇಶದಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ಪಡೆಯಲು ಕಾರ್ಯಪಡೆಯೊಂದನ್ನು ರಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಗಳ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಕೊಲ್ಕತ್ತಾ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ಘಟನೆಯ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ವೈದ್ಯಕೀಯ ಸಂಘಟನೆಗಳ ಪ್ರತಿನಿಧಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ  ಮಂಗಳವಾರ ಸಭೆ ನಡೆಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.

ವೈದ್ಯರು, ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಗಳ ಮೇಲೆ ದಾಳಿ ಮಾಡಿ ಹಿಂಸಾಚಾರ ತಡೆಯುವ ಉದ್ದೇಶದಿಂದ ಹೊಸ ಕಾಯ್ದೆ ಜಾರಿ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕಾನೂನು (ತಿದ್ದುಪಡಿ) ಮಸೂದೆಗೆ ರಾಜ್ಯಪಾಲರು  ಸೋಮವಾರ ಒಪ್ಪಿಗೆ ನೀಡಿದ್ದಾರೆ ಎಂದರು.

ADVERTISEMENT

‘ಹೊಸ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲಾಗುವುದು. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ವಿರುದ್ಧ ಅಗೌರವ ತೋರಿದರೆ, ಕೆಟ್ಟದಾಗಿ ಮಾತನಾಡಿದರೆ ಮತ್ತು ಹಿಂಸಾಚಾರ ನಡೆಸಿದರೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು. ಇದು ಜಾಮೀನುರಹಿತ ಅಪರಾಧ. 3 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆಯನ್ನೂ ವಿಧಿಸಬಹುದು. ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡರೂ ಜಾಮೀನುರಹಿತ ಅಪರಾಧವಾಗುತ್ತದೆ’ ಎಂದರು.

ಇದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಬೇಗನೆ ಇತ್ಯರ್ಥಗೊಳಿಸಲು ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು ಎಂಬ ಸಲಹೆಯೂ ಇದೆ ಎಂದು ಹೇಳಿದರು.

‘ಕೊಲ್ಕತ್ತಾದ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ವೈದ್ಯ ಸಮೂಹ ಮಾತ್ರವಲ್ಲ, ಎಲ್ಲರಲ್ಲೂ ಅಭದ್ರತೆ ಮತ್ತು ಭಯದ ವಾತಾವರಣ ಮೂಡಿಸಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಶೇ 50ಕ್ಕೂ ಹೆಚ್ಚು ಮಂದಿ ಮಹಿಳೆಯರೇ ಇದ್ದಾರೆ. ಇವರು ಅಸುರಕ್ಷಿತ ಮತ್ತು ಭಯದ ವಾತಾವರಣದಲ್ಲಿ ಮಾಡಬೇಕಾಗಿದೆ’ ಎಂದರು.

ರಾಜ್ಯದಲ್ಲಿ ಹೊಸ ಕಾಯ್ದೆಯಿಂದ ವೈದ್ಯಕೀಯ ಸಮುದಾಯಕ್ಕೆ ಹೆಚ್ಚಿನ ಸುರಕ್ಷತೆ ಸಿಗಲಿದೆ. ವೈದ್ಯರು ಮತ್ತು ವೈದ್ಯಕೀಯ ಸಮುದಾಯವನ್ನು ಗೌರವ ದಿಂದ ಕಾಣುವ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದೂ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.