ADVERTISEMENT

3.24 ಲಕ್ಷ ಆಸ್ತಿಗಳಿಂದ ₹624 ಕೋಟಿ ತೆರಿಗೆ ಬಾಕಿ; ಬಿಬಿಎಂಪಿಯಿಂದ ನೋಟಿಸ್‌ ಜಾರಿ

ಒಟಿಎಸ್‌ ಬಳಸಿಕೊಳ್ಳಲೂ ನಿರಾಸಕ್ತಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 19:30 IST
Last Updated 3 ಜುಲೈ 2024, 19:30 IST
<div class="paragraphs"><p>ax</p></div>

ax

   

ಬೆಂಗಳೂರು: ಕೆಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದ 3.24 ಲಕ್ಷ ಆಸ್ತಿ ಮಾಲೀಕರಿಂದ ಬಾಕಿ ಮೊತ್ತ ವಸೂಲಿ ಮಾಡಲು ‘ವಸೂಲಿ ಅಭಿಯಾನ’ ಆರಂಭಿಸಲು ಬಿಬಿಎಂಪಿ ನಿರ್ಧರಿಸಿದೆ. ಹಲವು ಬಾರಿ ನೋಟಿಸ್‌ ನೀಡಿದರೂ ತೆರಿಗೆ ಸುಸ್ಥಿದಾರರು ತೆರಿಗೆ ಪಾವತಿಸದೇ ಇರುವುದರಿಂದ ಪಾಲಿಕೆ ಈ ನಿರ್ಧಾರಕ್ಕೆ ಬಂದಿದೆ.

ನಗರ ವ್ಯಾಪ್ತಿಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಆಸ್ತಿದಾರರ ತೆರಿಗೆಯನ್ನು ಪುನರ್‌ ನಿಗದಿ ಮಾಡಿ ಮಾರ್ಚ್‌ನಲ್ಲೇ ಬೇಡಿಕೆ ಪತ್ರ ನೀಡಲಾಗಿತ್ತು. ಬಡ್ಡಿ ಹಾಗೂ ದಂಡಕ್ಕೆ ವಿನಾಯಿತಿ ನೀಡಿ ಒಂದು ಬಾರಿ ತೀರುವಳಿಗೆ (ಒಟಿಎಸ್‌) ಅವಕಾಶ ನೀಡಿದ್ದರೂ 3.24 ಲಕ್ಷ ಆಸ್ತಿದಾರರು ಕೆಲವು ವರ್ಷಗಳ ತೆರಿಗೆಯನ್ನು ಇನ್ನೂ ಪಾವತಿಸಿಲ್ಲ. ಈ ಮೊತ್ತ ₹624.88 ಕೋಟಿಯಷ್ಟಿದೆ.

ADVERTISEMENT

ಕಟ್ಟಡದ ವಾಸ್ತವ ವಿಸ್ತೀರ್ಣ ಅಥವಾ ವಲಯದ ಆಯ್ಕೆಯಲ್ಲಿ ತಪ್ಪಾಗಿ, ಆಸ್ತಿ ತೆರಿಗೆಯನ್ನು ಕಡಿಮೆ ಪಾವತಿಸುತ್ತಿದ್ದ ನಾಲ್ಕು ಲಕ್ಷಕ್ಕೂ ಅಧಿಕ ಆಸ್ತಿದಾರರಿಗೆ, ತೆರಿಗೆಯನ್ನು ಪುನರ್‌ನಿಗದಿ ಮಾಡಿ ಪಾಲಿಕೆ ವತಿಯಿಂದ ‘ಬೇಡಿಕೆ ಪತ್ರ’ ನೀಡಲಾಗಿತ್ತು. ಹಿಂದಿನ ವರ್ಷಗಳ ತೆರಿಗೆಗೆ ಬಡ್ಡಿ ಹಾಗೂ ದಂಡವನ್ನು ಪಾವತಿಸಲು ಹೊರೆಯಾಗುತ್ತದೆ ಎಂದು ಸರ್ಕಾರ ಅದನ್ನೆಲ್ಲ ಮನ್ನಾ ಮಾಡಿ, ಆಸ್ತಿ ತೆರಿಗೆಯನ್ನು ಮಾತ್ರ ಪಾವತಿಸಲು ಒಟಿಎಸ್‌ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಜುಲೈ 31ರವರೆಗೆ ಈ ವ್ಯವಸ್ಥೆ ಜಾರಿಯಲ್ಲಿದ್ದು, ನಂತರ ಎಲ್ಲ ರೀತಿ ಬಡ್ಡಿ ಹಾಗೂ ದಂಡ ಪಾವತಿಸಬೇಕಾಗುತ್ತದೆ.

ಏಪ್ರಿಲ್‌ 1ರಂತೆ 3.95 ಲಕ್ಷ ಆಸ್ತಿಗಳಿಗೆ ಬೇಡಿಕೆ ಪತ್ರ ನೀಡಲಾಗಿತ್ತು. ಇದರ ಮೊತ್ತ ₹733.71 ಕೋಟಿಯಾಗಿತ್ತು. ಜುಲೈ 1ರವರೆಗೆ ಸುಮಾರು 70 ಸಾವಿರ ಆಸ್ತಿಗಳ ಮಾಲೀಕರು ಮಾತ್ರ ಬೇಡಿಕೆ ಪತ್ರಕ್ಕೆ ಅನುಗುಣವಾಗಿ ತೆರಿಗೆಯನ್ನು ಪಾವತಿಸಿದ್ದಾರೆ.

ಆಸ್ತಿ ತೆರಿಗೆಯನ್ನು ತಪ್ಪಾಗಿ ಪಾವತಿಸುತ್ತಿರುವ ಇನ್ನೂ 16,790 ಆಸ್ತಿಗಳಿಗೆ ತೆರಿಗೆ ಪುನರ್‌ನಿಗದಿ ಮಾಡಿ ಏಪ್ರಿಲ್‌ನಿಂದ ಜುಲೈ ಅವಧಿಯಲ್ಲಿ ಪಾಲಿಕೆ ಸಿಬ್ಬಂದಿ ‘ಬೇಡಿಕೆ ಪತ್ರ’ ನೀಡಿದ್ದಾರೆ. ಈ ಆಸ್ತಿಗಳಿಂದ ₹239.94 ಕೋಟಿ ಬಾಕಿ ಉಳಿದಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

ಆಸ್ತಿ ಜಪ್ತಿಗೆ ಕ್ರಮ: ಮುನೀಶ್‌

‘ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರಿಗೆ ಒಟಿಎಸ್‌ ವ್ಯವಸ್ಥೆಯಡಿ ಸಾಕಷ್ಟು ಸಮಯ ನೀಡಲಾಗಿದ್ದರೂ ಪಾವತಿ ಮಾಡಿಲ್ಲ. ಹೀಗಾಗಿ, ಆಸ್ತಿ ತೆರಿಗೆ ಸುಸ್ತಿದಾರರಿಗೆ ಜಪ್ತಿ ನೋಟಿಸ್‌ ಜಾರಿ ಮಾಡಲಾಗುತ್ತಿದೆ. ಜುಲೈ 31ರೊಳಗೆ ಪಾವತಿ ಮಾಡದಿದ್ದರೆ, ಆಸ್ತಿಯನ್ನು ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಆಸ್ತಿಗಳ ಮಾಹಿತಿಯನ್ನು ಉಪ ನೋಂದಣಾಧಿಕಾರಿ ಕಚೇರಿಗಳಿಗೆ ಕಳುಹಿಸಿ ‘ಅಟ್ಯಾಚ್‌’ (ಋಣಭಾರ) ಮಾಡಿಕೊಳ್ಳುವ ಪ್ರಕ್ರಿಯೆಯನ್ನೂ ನಡೆಸಲಾಗುವುದು’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.