ADVERTISEMENT

ಬೆಂಗಳೂರು: ಜಮೀನು ಕಳೆದುಕೊಳ್ಳುವವರಿಗೆ ತೆರಿಗೆ ಭೀತಿ

ಪಿಆರ್‌ಆರ್‌ ಭೂಸ್ವಾಧೀನದ ಪರಿಹಾರಕ್ಕೆ ಬೀಳಲಿದೆ ಆದಾಯ ತೆರಿಗೆ ಹೊರೆ

ನವೀನ್‌ ಮಿನೇಜಸ್‌
Published 11 ನವೆಂಬರ್ 2024, 0:06 IST
Last Updated 11 ನವೆಂಬರ್ 2024, 0:06 IST
<div class="paragraphs"><p>ಬಿಡಿಎ</p></div>

ಬಿಡಿಎ

   

ಬೆಂಗಳೂರು: ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ನಿರ್ಮಾಣಕ್ಕೆ ಅಗತ್ಯವಿರುವ 2,650 ಎಕರೆ ಜಮೀನನ್ನು 1894ರ ಭೂಸ್ವಾಧೀನ ಕಾಯ್ದೆಯಡಿ ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪ್ರಕ್ರಿಯೆ ಆರಂಭಿಸಿದೆ. ಪರಿಣಾಮವಾಗಿ ಈ ಯೋಜನೆಯಿಂದ ಜಮೀನು ಕಳೆದುಕೊಳ್ಳಲಿರುವ ಸಾವಿರಾರು ಮಂದಿ ರೈತರು, ಬಿಡಿಎ ನೀಡುವ ಪರಿಹಾರದ ಮೊತ್ತಕ್ಕೂ ಆದಾಯ ತೆರಿಗೆ ಪಾವತಿಸಬೇಕಾದ ಬಿಕ್ಕಟ್ಟಿಗೆ ಸಿಲುಕಲಿದ್ದಾರೆ.

ಸದ್ಯ, ‘ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್‌ ಸ್ಥಾಪನೆ ಕಾಯ್ದೆ–2013’ರ ಅಡಿಯಲ್ಲಿ ನಡೆಯುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಜಮೀನು ಮಾಲೀಕರಿಗೆ ನೀಡುವ ಪರಿಹಾರದ ಮೊತ್ತಕ್ಕೆ ಮಾತ್ರ ಆದಾಯ ತೆರಿಗೆಯಿಂದ ವಿನಾಯಿತಿ ಇದೆ. ಆದರೆ, ಉಳಿದ ಯಾವುದೇ ಕಾಯ್ದೆಗಳ ಅಡಿಯಲ್ಲಿ ನಡೆಯುವ ಭೂಸ್ವಾಧೀನ ಪ್ರಕ್ರಿಯೆ ನಡೆದರೂ, ರೈತರು ಪಡೆಯುವ ಪರಿಹಾರದ ಮೊತ್ತಕ್ಕೆ ಆದಾಯ ತೆರಿಗೆ ಪಾವತಿಸಬೇಕಾಗಿದೆ.

ADVERTISEMENT

ಪಿಆರ್‌ಆರ್‌ ನಿರ್ಮಾಣಕ್ಕೆ 1894ರ ಭೂಸ್ವಾಧೀನ ಕಾಯ್ದೆಯ ಅಡಿಯಲ್ಲೇ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ ಎಂದು ರಾಜ್ಯ ಸರ್ಕಾರ ಸೆಪ್ಟೆಂಬರ್‌ 21ರಂದು ಆದೇಶ ಹೊರಡಿಸಿದೆ. ಆಯಾ ಗ್ರಾಮಗಳಲ್ಲಿನ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳ ಆಧಾರದಲ್ಲಿ ಪರಿಹಾರದ ಮೊತ್ತ ನಿಗದಿಪಡಿಸಲಿದ್ದು, ಸಮ್ಮತಿ ಆಧಾರದ ಭೂಸ್ವಾಧೀನ ಪ್ರಕ್ರಿಯೆ ಮುಕ್ತವಾಗಿ ನಡೆಯಲಿದೆ ಎಂದೂ ಆದೇಶದಲ್ಲಿ ಹೇಳಲಾಗಿದೆ.

‘ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್‌ ಸ್ಥಾಪನೆ ಕಾಯ್ದೆ–2013’ರ ಸೆಕ್ಷನ್‌ 96 ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿತರಿಸುವ ಪರಿಹಾರದ ಮೊತ್ತಕ್ಕೆ ಆದಾಯ ತೆರಿಗೆ ವಿಧಿಸುವುದರಿಂದ ವಿನಾಯ್ತಿ ನೀಡುತ್ತದೆ. ಆದರೆ, 1894ರ ಕಾಯ್ದೆಯಲ್ಲಿ ಅಂತಹ ಯಾವುದೇ ಸೆಕ್ಷನ್‌ ಇಲ್ಲ. ಆದಾಯ ತೆರಿಗೆ ವಿನಾಯ್ತಿಯು 2013ರ ಕಾಯ್ದೆಯಡಿ ನಡೆಯುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ಪರಿಹಾರಕ್ಕೆ ಮಾತ್ರ ಸೀಮಿತವಾಗಿದೆ ಎಂದು ರಾಜ್ಯ ಹೈಕೋರ್ಟ್‌ನ ವಿಭಾಗೀಯ ಪೀಠವು ಅಕ್ಟೋಬರ್‌ 29ರಂದು ನೀಡಿರುವ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ರೈತರಲ್ಲಿ ಆತಂಕ: ಹೈಕೋರ್ಟ್‌ ತೀರ್ಪಿನ ಬೆನ್ನಲ್ಲೇ ರೈತರಲ್ಲಿ ಆತಂಕ ಮೂಡಿದೆ. ‘ಬೆಂಗಳೂರು ಬಿಸಿನೆಸ್‌ ಕಾರಿಡಾರ್‌’ ಹೆಸರಿನ 73 ಕಿ.ಮೀ. ಉದ್ದದ ಪಿಆರ್‌ಆರ್‌ ನಿರ್ಮಾಣಕ್ಕೆ ಜಮೀನು ಕಳೆದುಕೊಳ್ಳುವ ತಮಗೆ 2013ರ ಕಾಯ್ದೆಯಡಿ ಪರಿಹಾರ ನೀಡುತ್ತಿಲ್ಲ ಎಂಬ ಅಸಮಾಧಾನದ ಜತೆಯಲ್ಲೇ, ಪರಿಹಾರದ ಮೊತ್ತಕ್ಕೆ ಆದಾಯ ತೆರಿಗೆಯೂ ಬೀಳಲಿದೆ ಎಂಬುದು ಅವರ ಆತಂಕಕ್ಕೆ ಕಾರಣ.

ಕನಿಷ್ಠ ಶೇ 12.5ರಷ್ಟು ತೆರಿಗೆ ಮತ್ತು ಆದಾಯ ತೆರಿಗೆ ಹಿಂಬಾಕಿಯನ್ನೂ ಕಡಿತ ಮಾಡಿಕೊಳ್ಳಬಹುದು ಎಂಬ ಚರ್ಚೆ ರೈತರೊಳಗೆ ಆರಂಭವಾಗಿದೆ.

ಪಿಆರ್‌ಆರ್‌ ಭೂಸ್ವಾಧೀನ ವೆಚ್ಚ ತಗ್ಗಿಸುವ ಉದ್ದೇಶದಿಂದ ಯೋಜನೆ ಹಾದುಹೋಗುವ ಮಾರ್ಗದಲ್ಲಿನ ಗ್ರಾಮಗಳ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಕಡಿಮೆ ಮಾಡಲಾಗಿತ್ತು. ಅದಾದ ಕೆಲವೇ ತಿಂಗಳಲ್ಲಿ ತೆರಿಗೆ ಭಾರದ ಭೀತಿಯೂ ರೈತರನ್ನು ಆವರಿಸಿದೆ.

ಬಿಡಿಎ ಮಾತ್ರವಲ್ಲ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ), ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಕೂಡ 2013ರ ಕಾಯ್ದೆಯಡಿ ಭೂಸ್ವಾಧೀನ ಪ್ರಕ್ರಿಯೆ ನಡೆಸುತ್ತಿಲ್ಲ. ಈ ಸಂಸ್ಥೆಗಳ ಯೋಜನೆಗಳಿಗೆ ಜಮೀನು ಕಳೆದುಕೊಳ್ಳುವ ರೈತರಿಗೂ ತೆರಿಗೆ ಹೊರೆ ಬೀಳುವುದು ಖಚಿತವಾಗಿದೆ.

‘ರಾಜ್ಯ ಸರ್ಕಾರವು ರೈತರ ಜೀವನದ ಜತೆ ಚೆಲ್ಲಾಟ ಆಡಬಾರದು. ರೈತರು ಜಮೀನು ಕಳೆದುಕೊಂಡು ಪಡೆಯುವ ಪರಿಹಾರಕ್ಕೆ ತೆರಿಗೆ ವಿಧಿಸುವುದು ಸರಿಯಲ್ಲ. ಬಿಡಿಎ 2013ರ ಕಾಯ್ದೆಯ ಅಡಿಯಲ್ಲೇ ಭೂಸ್ವಾಧೀನ ಪ್ರಕ್ರಿಯೆ ನಡೆಸುವುದಾಗಿ ಘೋಷಿಸಬೇಕು. ರೈತರ ಹಿತರಕ್ಷಣೆಗೆ ಇರುವ ಮಾರ್ಗ ಇದೊಂದೆ’ ಎನ್ನುತ್ತಾರೆ ಕಾನೂನು ತಜ್ಞರೊಬ್ಬರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.