ADVERTISEMENT

ನ.30ರೊಳಗೆ ₹4 ಸಾವಿರ ಕೋಟಿ ತೆರಿಗೆ ಸಂಗ್ರಹ ಗುರಿ: ತುಷಾರ್‌ ಗಿರಿನಾಥ್‌

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 15:54 IST
Last Updated 25 ನವೆಂಬರ್ 2024, 15:54 IST
ತುಷಾರ್‌ ಗಿರಿನಾಥ್‌
ತುಷಾರ್‌ ಗಿರಿನಾಥ್‌   

ಬೆಂಗಳೂರು: ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್‌) ನವೆಂಬರ್‌ 30ರಂದು ಮುಕ್ತಾಯಗೊಳ್ಳುತ್ತಿದ್ದು, ಆ ವೇಳೆಗೆ ಒಟ್ಟು ₹4 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ಬಡ್ಡಿ ಹಾಗೂ ದಂಡಕ್ಕೆ ವಿನಾಯಿತಿ ನೀಡಲಾಗಿರುವ ಒಟಿಎಸ್‌ ಯೋಜನೆಯ ಕೊನೆಯ ದಿನಗಳಲ್ಲಿ ನಾಗರಿಕರು ಅದರ ಉಪಯೋಗ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಡಿಸೆಂಬರ್‌ 1ರಿಂದ ಸುಮಾರು ಎರಡು ಪಟ್ಟು ಹೆಚ್ಚು ಪಾವತಿಸಬೇಕಾಗುತ್ತದೆ ಎಂದು ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.

ಒಟಿಎಸ್‌ ಯೋಜನೆ ಅವಧಿಯನ್ನು ವಿಸ್ತರಿಸುವುದಿಲ್ಲ. ಹೀಗಾಗಿ, ಆಸ್ತಿ ಮಾಲೀಕರು ಕೊನೆಯ ದಿನಕ್ಕಾಗಿ ಕಾಯದೆ ಈಗಲೇ ಪಾವತಿಸಬೇಕು. ಆನ್‌ಲೈನ್‌ನಲ್ಲಿ ಸಮಸ್ಯೆಯಾದರೆ ಸಹಾಯಕ ಕಂದಾಯ ಆಯುಕ್ತರ (ಎಆರ್‌ಒ) ಕಚೇರಿಯಲ್ಲಿ ಡಿಡಿ ಅಥವಾ ಚೆಕ್‌ ನೀಡಿ ಪಾವತಿ ಮಾಡಬಹುದು ಎಂದರು.

ADVERTISEMENT

ಆಸ್ತಿ ತೆರಿಗೆ ಈವರೆಗೆ ₹3,751 ಕೋಟಿ ಸಂಗ್ರಹವಾಗಿದೆ. ನವೆಂಬರ್‌ 30ರ ಅಂತ್ಯಕ್ಕೆ ಈ ಮೊತ್ತವನ್ನು ₹4,000 ಕೋಟಿಗೆ ಮುಟ್ಟಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಂತರದ ನಾಲ್ಕು ತಿಂಗಳಲ್ಲಿ ಆರ್ಥಿಕ ವರ್ಷದ ಗುರಿ ₹5,200 ಕೋಟಿಯನ್ನು ಮುಟ್ಟಲು ಪ್ರಯತ್ನಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ವಲಯವಾರು ಬಜೆಟ್‌: ಬಿಬಿಎಂಪಿಯಲ್ಲಿ ವಲಯವಾರು ಬಜೆಟ್‌ ಅನ್ನು ಈ ಬಾರಿ ಅನುಷ್ಠಾನಗೊಳಿಸಲಾಗುತ್ತದೆ. ಕಳೆದ ಬಾರಿಯೇ ವಲಯವಾರು ಬಜೆಟ್‌ ಮಾಡಲು ನಿರ್ಧರಿಸಲಾಗಿತ್ತು. ಅದು ಸಾಧ್ಯವಾಗಲಿಲ್ಲ. ಈ ಬಾರಿ ವಲಯಕ್ಕೆ ಅಗತ್ಯವಾದ ಯೋಜನೆಗಳ ಪಟ್ಟಿಯನ್ನು ನೀಡಲು ವಲಯ ಆಯುಕ್ತರಿಗೆ ಸೋಮವಾರ ನಡೆದ ಸಭೆಯಲ್ಲಿ ಸೂಚಿಸಲಾಗಿದೆ ಎಂದರು.

ಬಜೆಟ್‌ನಲ್ಲಿ ಯಾವ ವಲಯಕ್ಕೆ ಎಷ್ಟು ಅನುದಾನವು ಯಾವ ಮುಖ್ಯ ಶೀರ್ಷಿಕೆ ಹಾಗೂ ಯೋಜನೆಯಲ್ಲಿ ಲಭ್ಯವಾಗುತ್ತದೆ ಎಂಬುದನ್ನು ತಿಳಿಸಲಾಗುತ್ತದೆ. ಇದರಿಂದ ವಲಯ ಆಯುಕ್ತರು ತಮ್ಮ ವ್ಯಾಪ್ತಿಯ ಯೋಜನೆಗಳನ್ನು ನಿರ್ವಹಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಇ–ಖಾತಾ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಇ–ಖಾತಾ ನೀಡಲು ಹಲವು ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ನಾಗರಿಕರು ತಾವೇ ಎಲ್ಲ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ಎಆರ್‌ಒ ಕಚೇರಿಗೆ ಹೋಗದೆ ಇ–ಖಾತಾ ಪಡೆಯಬಹುದಾಗಿದೆ ಎಂದು ತಿಳಿಸಿದರು.

ರಾಜಾಜಿನಗರದಲ್ಲಿ ಮರ ಬಿದ್ದು ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ಬಿಬಿಎಂಪಿ ವತಿಯಿಂದ ಪರಿಹಾರ ನೀಡಲಾಗುತ್ತದೆ. ಕಂದಾಯ ಅಧಿಕಾರಿಯ ವರದಿ ಆಧರಿಸಿ ಮೊತ್ತ ನಿಗದಿಮಾಡಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.