ADVERTISEMENT

‘ನಮ್ಮ ತೆರಿಗೆ ನಮ್ಮ ಹಕ್ಕು’ ನಾಗರಿಕರ ಜಾಥಾ 17ಕ್ಕೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 15:32 IST
Last Updated 15 ಏಪ್ರಿಲ್ 2024, 15:32 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ‘ಕೇಂದ್ರ ಸರ್ಕಾರದ ತಾರತಮ್ಯ ಧೋರಣೆಯನ್ನು ಖಂಡಿಸಿ ಸಾಹಿತಿಗಳು ಮತ್ತು ಕನ್ನಡಪರ ಹೋರಾಟಗಾರರು ಇದೇ 17ರಂದು ‘ನಮ್ಮ ತೆರಿಗೆ ನಮ್ಮ ಹಕ್ಕು’ ನಾಗರಿಕರ ಜಾಥಾ ಹಮ್ಮಿಕೊಂಡಿದ್ದಾರೆ. ಕೊಟ್ಟಿಗೆಪಾಳ್ಯ ವಾರ್ಡ್‌ನಲ್ಲಿರುವ ಮಾಳಗಾಳದ ಶಂಕರ್‌ನಾಗ್‌ ವೃತ್ತದಿಂದ ಈ ಜಾಥಾ ಪ್ರಾರಂಭವಾಗಲಿದೆ’ ಎಂದು ಕನ್ನಡ ಜಾಣಜಾಣೆಯರ ವೇದಿಕೆ ತಿಳಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ, ‘ಚುನಾವಣೆಯ ಸಂದರ್ಭದಲ್ಲಿ ಸುಳ್ಳನ್ನು ಸತ್ಯ ಹಾಗೂ ಸತ್ಯವನ್ನು ಸುಳ್ಳೆಂದು ಬಿಂಬಿಸಲಾಗುತ್ತಿದೆ. ಈ ಕೆಟ್ಟ ರಾಜಕಾರಣದಿಂದ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿಹೋಗಿದ್ದು, ಕಳೆದ ಹತ್ತು ವರ್ಷಗಳಲ್ಲಿ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅಪಾರ ವಂಚನೆಯಾಗಿದೆ’ ಎಂದು ದೂರಿದರು.

ADVERTISEMENT

‘ಕೇಂದ್ರ ಹಣಕಾಸು ಸಚಿವರು ಕರ್ನಾಟಕಕ್ಕೆ ಅನುದಾನ ನೀಡುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನಿಸಬೇಕಿದ್ದ ನಮ್ಮ ಸಂಸದರು ದಿವ್ಯ ಮೌನ ವಹಿಸಿದ್ದಾರೆ. ನಮ್ಮ ರಾಜ್ಯಕ್ಕೆ ಸಲ್ಲಬೇಕಾಗಿದ್ದ ತೆರಿಗೆಯನ್ನು ತರಲಾಗದ ಇಂತಹವರಿಗೆ ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕಿದೆ’ ಎಂದು ತಿಳಿಸಿದರು.

ಇತಿಹಾಸಕಾರ ತಲಕಾಡು ಚಿಕ್ಕರಂಗೇಗೌಡ, ‘ನಮ್ಮ ದೇಶದ ಎಲ್ಲ ಮಾಜಿ ಪ್ರಧಾನಿಗಳು ಒಂದಲ್ಲ ಒಂದು ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದರು. ಆದರೆ, ಈಗಿರುವ ಪ್ರಧಾನಿ ಯಾವುದೇ ಕ್ಷೇತ್ರದಲ್ಲಿ ಪರಿಣತಿ ಹೊಂದಿಲ್ಲ. ಒಂಥರಾ ಜೋಕರ್‌ ರೀತಿಯ ಪ್ರಧಾನಿಯನ್ನು ನಾವು ಹೊಂದಿದ್ದು, ಇದು ದೇಶದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿದೆ’ ಎಂದರು. 

‘ದಕ್ಷಿಣ ಭಾರತದ ಶ್ರೀಮಂತ ರಾಜ್ಯಗಳ ತೆರಿಗೆ ಹಣವನ್ನು ತೆಗೆದುಕೊಂಡು ಹೋಗಿ ಉತ್ತರ ಭಾರತದ ರಾಜ್ಯಗಳಿಗೆ ಅನುದಾನ ಹಂಚಿಕೆ ಮಾಡುತ್ತಿರುವವರು ನಿಜವಾದ ದೇಶದ್ರೋಹಿಗಳು’ ಎಂದು ಹೇಳಿದರು.

ಸಾಹಿತಿ ಎಲ್.ಎನ್. ಮುಕುಂದರಾಜ್, ಕಾ.ತ. ಚಿಕ್ಕಣ್ಣ, ಜಾಣಗೆರೆ ವೆಂಕಟರಾಮಯ್ಯ, ಎನ್. ಪ್ರಭಾ, ಎಸ್. ಭೈರೇಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.