ಬೆಂಗಳೂರು: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನೆಲಗದರನಹಳ್ಳಿ ಮುಖ್ಯ ರಸ್ತೆ ವಿಸ್ತರಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ಅಗತ್ಯ ಇರುವ ಜಾಗವನ್ನು ಟಿಡಿಆರ್ (ಅಭಿವೃದ್ಧಿ ಹಕ್ಕು ಪ್ರಮಾಣಪತ್ರ) ಪಡೆದು ಬಿಟ್ಟುಕೊಡಲು ಬಹುತೇಕ ಆಸ್ತಿ ಮಾಲೀಕರು ಒಪ್ಪಿದ್ದಾರೆ.
8ನೇ ಮೈಲಿಯಿಂದ ಗಂಗಾ ಇಂಟರ್ ನ್ಯಾಷನಲ್ ಶಾಲೆ ವರೆಗಿನ 2.4 ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ವಾಹನ ಚಾಲನೆ ಮಾಡುವುದೆಂದರೆ ಸಾಹಸ ಕೆಲಸ. ಹೆಸರಿಗೆ 30 ಅಡಿ ರಸ್ತೆ ಇದಾಗಿದ್ದು, ಕೆಲವು ಕಡೆ 15 ಅಡಿ ಮತ್ತು 20 ಅಡಿಯಷ್ಟೇ ಉಳಿದುಕೊಂಡಿದೆ. ಇಕ್ಕಟ್ಟಿನಿಂದ ಕೂಡಿದ ರಸ್ತೆಯಿಂದ ವಾಹನ ಸವಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ’ಪ್ರಜಾವಾಣಿ‘ ವರದಿ ಪ್ರಕಟಿಸಿತ್ತು.
ನೆಲಗದರನಹಳ್ಳಿ ಸುತ್ತಮುತ್ತಲ ನಿವಾಸಿಗಳು ತುಮಕೂರು ಮುಖ್ಯರಸ್ತೆ, ಮೆಟ್ರೊ ನಿಲ್ದಾಣ ತಲುಪಲು ಇದೇ ಪ್ರಮುಖ ರಸ್ತೆ. ನೆಲಗದರನಹಳ್ಳಿಯಿಂದ 8ನೇ ಮೈಲಿಯ ನಾಗಸಂದ್ರ ಕ್ರಾಸ್ ತನಕ ಪ್ರತಿನಿತ್ಯ ಬಸ್‌ಗಳು,ಲಾರಿಗಳು ಸೇರಿ ಸಾವಿರಾರು ವಾಹನಗಳು ಸಂಚರಿಸುತ್ತವೆ.
ಬೆಳಿಗ್ಗೆ ಮತ್ತು ಸಂಜೆ ಸಂಚಾರ ದಟ್ಟಣೆ ಉಂಟಾಗುವುದು ಇಲ್ಲಿ ಸಾಮಾನ್ಯ. ಸಂಚಾರ ದಟ್ಟಣೆ ಸಮಯದಲ್ಲಿ ದೊಡ್ಡ ವಾಹನವೊಂದು ಈ ರಸ್ತೆಗೆ ಪ್ರವೇಶಿಸಿತೆಂದರೆ ಗಂಟೆಗಟ್ಟಲೆ ಕಾದು ನಿಲ್ಲಲೇಬೇಕು. ಈ ದಟ್ಟಣೆ ಸೀಳಿಕೊಂಡು ನೆಲಗದರನಹಳ್ಳಿ ಗಂಗಾ ಇಂಟರ್ ನ್ಯಾಷನಲ್ ಶಾಲೆ ದಾಟಿದರೆ ಅಂದ್ರಹಳ್ಳಿ ಮೂಲಕ ಮಾಗಡಿ ರಸ್ತೆ ತನಕ ಸಾಗುವುದು ಸುಲಭ. ಮುಂದೆ ಅಗಲವಾದ ರಸ್ತೆಯಿದೆ.
60 ಅಡಿ ರಸ್ತೆಯನ್ನಾಗಿ ವಿಸ್ತರಿಸುವ ಯೋಜನೆ 10 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಮೂರು ಬಾರಿ ಶಂಕುಸ್ಥಾಪನೆ ನೆರವೇರಿದ್ದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ರಸ್ತೆಗೆ ಚಾಚಿಕೊಂಡಿರುವ ಕಟ್ಟಡಗಳನ್ನು ಬಿಬಿಎಂಪಿ ಅಧಿಕಾರಿಗಳು ಈ ಹಿಂದೆ ಗುರುತು ಮಾಡಿದ್ದರು. ಆದರೆ, ಸ್ವಾಧೀನ ಪ್ರಕ್ರಿಯೆ ಆರಂಭವಾಗಿರಲಿಲ್ಲ.
ಟಿಡಿಆರ್‌ಗೆ ಒಪ್ಪದೆ ಹಣದ ರೂಪದ ಪರಿಹಾರವೇ ಬೇಕೆಂದು ನಿವಾಸಿಗಳು ಪಟ್ಟು ಹಿಡಿದಿದ್ದರು. ಹೀಗಾಗಿ, ಯೋಜನೆ ನನೆಗುದಿಗೆ ಬಿದ್ದಿತ್ತು. ಅಧಿಕಾರಿಗಳು ಮತ್ತು ಶಾಸಕ ಆರ್.ಮಂಜುನಾಥ್ ಸಮ್ಮುಖದಲ್ಲಿ ಆಸ್ತಿ ಮಾಲೀಕರ ಸಭೆ ಮಂಗಳವಾರ ನಡೆಯಿತು. ಹಣದ ರೂಪದ ಪರಿಹಾರವೇ ಬೇಕು ಎಂದು ಮಾಲೀಕರು ಪಟ್ಟು ಮುಂದುವರಿಸಿದರು. ಅಂತಿಮವಾಗಿ ಸಭೆಯಲ್ಲಿದ್ದ ಬಹುತೇಕರು ಟಿಡಿಆರ್‌ಗೆ ಸಮ್ಮತಿಸಿದರು.
‘ರಸ್ತೆ ವಿಸ್ತರಣೆ ಆಗಲೇಬೇಕಿದ್ದು, ಟಿಡಿಆರ್ ಪಡೆದು ಜಾಗಬಿಟ್ಟುಕೊಡಲು ಶೇ 90ರಷ್ಟು ಜನರು ಒಪ್ಪಿದ್ದಾರೆ. ಹೀಗಾಗಿ, ಯೋಜನೆಗೆ ಮತ್ತೆ ಚಾಲನೆ ದೊರೆಯಲಿದೆ’ ಎಂದು ಆರ್. ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.