ಬೆಂಗಳೂರು: ಇಲ್ಲಿನ ಹೊರಮಾವು– ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆ ಯೋಜನೆಗೆ ಗುರುತಿಸಿರುವ ಕಟ್ಟಡ ಮತ್ತು ನಿವೇಶನಗಳನ್ನು ಸ್ವಾಧೀನಪಡಿಸಿಕೊಳ್ಳದೇ ‘ಅಭಿವೃದ್ಧಿ ಹಕ್ಕು ವರ್ಗಾವಣೆ ಪತ್ರ’ (ಟಿಡಿಆರ್‌ಸಿ) ವಿತರಿಸುವ ಮೂಲಕ ಬಿಬಿಎಂಪಿ ಅಧಿಕಾರಿಗಳು ರಾಜ್ಯ ಸರ್ಕಾರದ ಆದೇಶ ಕಡೆಗಣಿಸಿರುವುದನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪತ್ತೆ ಹಚ್ಚಿದೆ.
ಈ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ, ಒಳಸಂಚು ಮತ್ತು ವಂಚನೆ ಕುರಿತು ಎಸಿಬಿ ತನಿಖೆ ನಡೆಸುತ್ತಿದೆ. ‘ಸರ್ವೆ ನಂಬರ್ 132ರ ಜಮೀನು ಸೇರಿದಂತೆ ಯೋಜನೆಗೆ ಗುರುತಿಸಿರುವ ಕಟ್ಟಡ ಹಾಗೂ ನಿವೇಶನಗಳನ್ನು ಸ್ವಾಧೀನಪಡಿಸಿಕೊಳ್ಳದೇ ಟಿಡಿಆರ್‌ಸಿ ನೀಡಲಾಗಿದೆ’ ಎಂದು ಎಸಿಬಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ನಗರಾಭಿವೃದ್ಧಿ ಇಲಾಖೆಯ ಅಧಿಸೂಚನೆಯು (ಸಂ.ಯುಡಿಡಿ 154ಜಿಇಎಂ ಪಿಆರ್‌ಇ ಷರತ್ತು 3/ 2004 ಹಾಗೂ ಯುಡಿಡಿ 27ಎಂಎನ್‌ಜೆ ಷರತ್ತು 4/ 2011) ‘ಸಕ್ಷಮ ಪ್ರಾಧಿಕಾರ ಸ್ವತ್ತನ್ನು ಸ್ವಾಧೀನಕ್ಕೆ ಪಡೆದು ಬೇಲಿ ಹಾಕಿದ ಬಳಿಕವಷ್ಟೇ ಟಿಡಿಆರ್‌ಸಿ ವಿತರಿಸಬೇಕು’ ಎಂದು ಸ್ಪಷ್ಟವಾಗಿ ಸೂಚಿಸಿದೆ.
ಇದಲ್ಲದೆ, ಬಿಬಿಎಂಪಿ ಆಯುಕ್ತರು 2012ರ ಮೇ 19 ಮತ್ತು ಜೂನ್ 13ರಂದು ಹೊರಡಿಸಿರುವ ಸುತ್ತೋಲೆಗಳಲ್ಲೂ ‘ಕಟ್ಟಡ ಮತ್ತು ನಿವೇಶನಗಳ ಮಾಲೀಕರು ಬರೆದುಕೊಟ್ಟ ಹಕ್ಕು ಬಿಡುಗಡೆ ಪತ್ರ ನೋಂದಣಿಯಾದ ಬಳಿಕ ಆಸ್ತಿಗಳನ್ನು ಸ್ವಾಧೀನಕ್ಕೆ ಪಡೆಯಬೇಕು. ಸದರಿ ಜಾಗದಲ್ಲಿ ಕಟ್ಟಡ ಇಲ್ಲವೆ ಕಾಂಪೌಂಡ್ ಇದ್ದಲ್ಲಿ ಮಾಲೀಕರ ಖರ್ಚಿನಿಂದ ಒಡೆಯಬೇಕು. ಸ್ವಾಧೀನಕ್ಕೆ ಮುನ್ನ ಮತ್ತು ನಂತರದ ಫೋಟೊ ತೆಗೆದು ಕಡತದಲ್ಲಿ ಲಗತ್ತಿಸಿದ ನಂತರವಷ್ಟೇ ಟಿಡಿಆರ್‌ಸಿ ವಿತರಿಸಬೇಕು’ ಎಂದು ಹೇಳಲಾಗಿದೆ.
ಹೀಗಿದ್ದರೂ, ಕೆ.ಆರ್. ಪುರ ಹೋಬಳಿಯ ಕೌದೇನಹಳ್ಳಿ ಗ್ರಾಮದ ಮೂಲಕ ಹಾದು ಹೋಗಿರುವ ಹೊರಮಾವು– ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆ ಯೋಜನೆಗೆ ಬಿಬಿಎಂಪಿ 2009ರ ಜುಲೈನಲ್ಲಿ ಅಧಿಸೂಚನೆ ಹೊರಡಿಸಿದೆ. 11 ವರ್ಷ ಕಳೆದರೂ ಯೋಜನೆಗೆ ಗುರುತಿಸಲಾಗಿರುವ ಕಟ್ಟಡ ಮತ್ತು ನಿವೇಶನಗಳನ್ನು ಸ್ವಾಧೀನಪಡಿಸಿಕೊಂಡಿಲ್ಲ. ಇದರಿಂದಾಗಿ ರಸ್ತೆ ವಿಸ್ತರಣೆ ಯೋಜನೆ ನನೆಗುದಿಗೆ ಬಿದ್ದಿದೆ ಎಂದೂ ಪತ್ರದಲ್ಲಿ ವಿವರಿಸಿದ್ದಾರೆ.
ಆದರೆ, ಸರ್ವೆ ನಂಬರ್ 132ರ ಜಮೀನಿನ ಮೂಲ ಮಾಲೀಕರಾದ ಮುನಿರಾಜಪ್ಪ ಮತ್ತು ಕುಟುಂಬದವರಿಗೆ ಟಿಡಿಆರ್‌ಸಿ ವಿತರಿಸಲು 2014ರ ಫೆಬ್ರುವರಿ 14ರಂದು ಬಿಬಿಎಂಪಿ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಈ ಜಮೀನನ್ನು ರೆವಿನ್ಯೂ ಬಡಾವಣೆಯಾಗಿ ಪರಿವರ್ತಿಸಿ, ಸೈಟುಗಳನ್ನು ಬೇರೆಯವರಿಗೆ ಮಾರಿರುವುದನ್ನು ಮರೆಮಾಚಿ, ಮೂಲ ಮಾಲೀಕರಿಗೆ ಟಿಡಿಆರ್‌ಸಿ ವಿತರಿಸುವ ಮೂಲಕ ವಂಚಿಸಲಾಗಿದೆ ಎಂದೂ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಈ ಅಕ್ರಮ ವ್ಯವಹಾರದಲ್ಲಿ ಬಿಬಿಎಂಪಿ ಅನೇಕ ಅಧಿಕಾರಿಗಳು, ರಿಯಲ್ ಎಸ್ಟೇಟ್ ಕುಳಗಳು ಮತ್ತು ಖಾಸಗಿ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.