ಬೆಂಗಳೂರು: ಪ್ರತಿಷ್ಠಿತ ಕಂಪನಿಗಳ ‘ಬ್ರ್ಯಾಂಡ್’ ಹೆಸರಿನಲ್ಲಿ ನಕಲಿ ಟೀ ಪುಡಿ ತಯಾರಿಸಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಬಂಡೆಪಾಳ್ಯ ಠಾಣೆ ಪೊಲೀಸರು, ಆರೋಪಿಗಳಿಂದ ಪ್ಯಾಕಿಂಗ್ ಯಂತ್ರ, 2,497 ಕೆ.ಜಿ. ತೂಕದ ನಕಲಿ ಟೀ ಪುಡಿ ಸೇರಿ ಒಟ್ಟು ₹ 30 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ರಾಜಸ್ಥಾನದ ಜಗರಾಂ ಮತ್ತು ಆತನ ಸಹೋದರ ಭವರ್ ಲಾಲ್ ಬಂಧಿತರು. ಪ್ರಮುಖ ಆರೋಪಿ ರಮೇಶ್ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಹಿಂದೂಸ್ತಾನ ಲೀವರ್ ಲಿಮಿಟೆಡ್ ಕಂಪನಿಯ ರೆಡ್ ಲೇಬಲ್, ಬ್ರೂಕ್ ಬಾಂಡ್ 3 ರೋಸಸ್ ಹೆಸರಲ್ಲಿ ಆರೋಪಿಗಳು ನಕಲಿ ಟೀ ಪುಡಿ ಮಾರಾಟ ಮಾಡುತ್ತಿದ್ದರು.
ತಲೆಮರೆಸಿಕೊಂಡಿರುವ ಆರೋಪಿ ರಮೇಶ್, ಸಂಬಂಧಿಕರನ್ನು ನಗರಕ್ಕೆ ಕರೆಕೊಂಡು ಬಂದು ಕಾಟನ್‌ಪೇಟೆಯಲ್ಲಿ ಬಾಡಿಗೆ ಮನೆಯಲ್ಲಿ ಇರಿಸಿದ್ದ. ಆರೋಪಿ ಗಿರಿನಗರದಲ್ಲಿ ಬಾಡಿಗೆ ಗೋದಾಮು ಹೊಂದಿದ್ದು, ಅಲ್ಲಿಯೇ ಟೀ ಪುಡಿ ಪ್ಯಾಕಿಂಗ್ ಮಾಡಲಾಗುತ್ತಿತ್ತು. ಗೋದಾಮಿನಲ್ಲಿ ಐದಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು.
ಆರೋಪಿಗಳು ಎರಡು ವರ್ಷಗಳಿಂದ ನಕಲಿ ಟೀ ಪುಡಿ ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಗೋದಾಮಿನ ಉಸ್ತುವಾರಿಯನ್ನು ಜಗರಾಂ ನೋಡಿಕೊಳ್ಳುತ್ತಿದ್ದರೆ, ಭವರ್ ಲಾಲ್ ಅಂಗಡಿಗಳಿಗೆ ಟೀ ಪುಡಿ ಕೊಂಡೊಯ್ದು ಮಾರಾಟ ಮಾಡುತ್ತಿದ್ದ ಎನ್ನುವುದು ವಿಚಾರಣೆಯಿಂದ ಗೊತ್ತಾಗಿದೆ.
ಅಸಲಿ ಕಂಪನಿಯಂತೆ ಟೀ ಪುಡಿ ಪ್ಯಾಕಿಂಗ್ ಇದ್ದು, ಅದೇ ದರವನ್ನು ಪೊಟ್ಟಣದ ಮೇಲೆ ನಮೂದಿಸಲಾಗಿದೆ. 250 ಗ್ರಾಂ ಟೀ ಪುಡಿಯ ನೈಜ ಬೆಲೆ ₹ 140 ಇದ್ದರೆ, ಆರೋಪಿಗಳು ₹ 90, ₹ 100ಕ್ಕೆ ಮಾರಾಟ ಮಾಡುತ್ತಿದ್ದರು. ಆರೋಪಿಗಳು ಬೀದಿಬದಿ ತಳ್ಳುಗಾಡಿಯಲ್ಲಿ ಟೀ ಮಾಡುವ ಹಾಗೂ ಸ್ಲಂಗಳಲ್ಲಿರುವ ಸಣ್ಣ ಅಂಗಡಿಗಳನ್ನು ಹುಡುಕಿ ಮಾರಾಟ ಮಾಡುತ್ತಿದ್ದರು.
‘ಬಂಡೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಕಡಿಮೆ ಮೊತ್ತಕ್ಕೆ ಪ್ರತಿಷ್ಠಿತ ಕಂಪನಿಯ ಟೀ ಪುಡಿ ಮಾರಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ರಮೇಶ್ ಎಲ್ಲಿಂದ ಟೀ ಪುಡಿ ತರಿಸುತ್ತಿದ್ದ ಎಂಬ ಮಾಹಿತಿ ಇಲ್ಲ. ಆತನ ಬಂಧನದ ಬಳಿಕ ಮಾಹಿತಿ ಗೊತ್ತಾಗಲಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.