ADVERTISEMENT

ಬೆಂಗಳೂರು | ವಿದ್ಯಾರ್ಥಿ ಹಲ್ಲು ಮುರಿದ ಶಿಕ್ಷಕಿ: ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 16:11 IST
Last Updated 8 ನವೆಂಬರ್ 2024, 16:11 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

ಬೆಂಗಳೂರು: ಜಯನಗರದ ಕ್ರೈಸ್ಟ್‌ ಶಾಲೆಯಲ್ಲಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ ಹಲ್ಲು ಮುರಿದ ಪ್ರಕರಣದ ಆರೋಪದಡಿ ಹಿಂದಿ ಶಿಕ್ಷಕಿ ಅಜ್ಮತ್‌ ಅವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಆರನೇ ತರಗತಿ ವಿದ್ಯಾರ್ಥಿ ಅಶ್ವಿನ್ (11) ಮೇಲೆ ಶಿಕ್ಷಕಿ ಹಲ್ಲೆ ನಡೆಸಿದ್ದಾರೆ ಎಂದು ದೂರಿ ಆತನ ತಂದೆ ಅನಿಲ್ ಕುಮಾರ್ ವಿ. ಪೈ ದೂರು ನೀಡಿದ್ದು,ಎಫ್‌ಐಆರ್ ದಾಖಲಿಸಲಾಗಿದೆ.  

ADVERTISEMENT

‘ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಿಕ್ಷಕಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ನ.7ರಂದು ಅಶ್ವಿನ್ ಜೊತೆ ಇತರ ವಿದ್ಯಾರ್ಥಿಗಳು ತರಗತಿಯಲ್ಲಿ ಗೋಸ್ಮಿಕ್ (ಗಮ್) ಮತ್ತು ನೀರು ಚೆಲ್ಲುತ್ತಾ ಆಡುತ್ತಿದ್ದರು.  ಇದನ್ನು ಶಿಕ್ಷಕರಿಗೆ ತಿಳಿಸಲು ಅಶ್ವಿನ್ ತೆರಳಿದ್ದ. ಅದೇ ವೇಳೆ ಎದುರಾದ ಹಿಂದಿ ವಿಷಯದ ಶಿಕ್ಷಕಿ ಅಜ್ಮತ್‌ ಅವರು ಬಾಲಕನ ಮುಖಕ್ಕೆ ಕೋಲಿನಿಂದ ಹೊಡೆದಿದ್ದು, ಹಲ್ಲು ಮುರಿದಿದೆ. ಇದನ್ನು ನನ್ನ ಗಮನಕ್ಕೆ ತಾರದೇ ಸಿಬ್ಬಂದಿಯೇ ರಾಜಿ ಮಾಡಲು ಪ್ರಯತ್ನಿಸಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಾಲಕನಿಗೆ ಜಯನಗರ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

‘ಮಧ್ಯಾಹ್ನ ಊಟ ಮುಗಿಸಿ ಹೋದಾಗ ವಿದ್ಯಾರ್ಥಿಗಳು ಜಗಳ ಮಾಡಿಕೊಳ್ಳುತ್ತಿದ್ದರು. ಆಗ ಹಲ್ಲು ಮುರಿದಿರಬಹುದು. ಗಲಾಟೆ ನಿಯಂತ್ರಿಸಲು ಕೈಗೆ ಒಂದು ಏಟು ಕೊಟ್ಟಿದ್ದೆ ಅಷ್ಟೆ. ವಿದ್ಯಾರ್ಥಿ ಮುಖಕ್ಕೆ ಪಟಾಕಿಯಿಂದ ಗಾಯವಾಗಿತ್ತು’ ಎಂದು ಶಿಕ್ಷಕಿ ಸ್ಪಷ್ಟನೆ ನೀಡಿದ್ದಾರೆ.

ಘಟನೆ ಸಂಬಂಧ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿ ಹಾಗೂ ಶಿಕ್ಷಕಿಯಿಂದ ಮಾಹಿತಿ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.