ADVERTISEMENT

ಶಿಕ್ಷಕರಿಗೆ ಸಂಬಳ ಇಲ್ಲದೆ ಪರದಾಟ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 20:15 IST
Last Updated 22 ಆಗಸ್ಟ್ 2019, 20:15 IST
   

ಬೆಂಗಳೂರು: ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ಶಿಕ್ಷಕರ ವೇತನ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಹೇಳಿದ್ದರೂ, ಹಲವಾರು ಜಿಲ್ಲೆಗಳಲ್ಲಿ ಶಿಕ್ಷಕರಿಗೆ ಇನ್ನೂ ಎರಡು, ಮೂರು ತಿಂಗಳ ಸಂಬಳ ಕೈಸೇರಿಲ್ಲ.

ವಿಳಂಬವಾಗಿ ಬರುವ ಸಂಬಳದಿಂದ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಹಲವು ಶಿಕ್ಷಕರು ಆರೋಪಿಸಿದ್ದು, ಕೆಲವೆಡೆ ಶಿಕ್ಷಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಗುಂಡ್ಲುಪೇಟೆಯಲ್ಲಿ ಶುಕ್ರವಾರದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲು ಶಿಕ್ಷಕರು ತೀರ್ಮಾನಿಸಿದ್ದಾರೆ.

ಬೆಳಗಾವಿ, ಮಂಡ್ಯ, ಕೊಡಗು ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದಾಗಿ ಮಾಹಿತಿಗಳನ್ನು ಸಾಫ್ಟ್‌ವೇರ್‌ನಲ್ಲಿ ಸೇರಿಸುವುದು ಕಷ್ಟವಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿತ್ತು. ಉಳಿದ ಜಿಲ್ಲೆಗಳಿಂದಲೂ ದೂರುಗಳು ಕೇಳಿಬರುತ್ತಿವೆ. ‘ವೇತನ ಬಿಡುಗಡೆಯಾಗಿದ್ದರೂ ಎರಡು ತಿಂಗಳ ವೇತನ ಸಿಗುವುದು ಇನ್ನೂ ಬಾಕಿ ಇದೆ’ ಎಂದು ಬಾಗಲಕೋಟೆಯ ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಶೀಘ್ರ ವೇತನ ಲಭ್ಯ: ‘ಕೆಲವು ಜಿಲ್ಲೆಗಳ ಕೆಲವು ಶಾಲೆಗಳಲ್ಲಿ ಮಾತ್ರ ಇಂತಹ ಸಮಸ್ಯೆ ಆಗಿರುವುದು ನಮ್ಮ ಗಮನಕ್ಕೆ ಬಂದಿದೆ. ಅದರ ಮಾಹಿತಿ ಸಂಗ್ರಹಿಸುತ್ತಿದ್ದು, ಒಂದೆರಡು ದಿನಗಳಲ್ಲಿ ಅವರಿಗೂ ಬಾಕಿ ಸಂಬಳ ಸಿಗಲಿದೆ. ಮುಂದಿನ ದಿನಗಳಲ್ಲಿ ಎಸ್‌ಎಸ್ಎ, ಆರ್‌ಎಂಎಸ್‌ಎ ಶಿಕ್ಷಕರಿಗೆ ಸಹ ಇತರ ಶಿಕ್ಷಕರಿಗೆ ನೀಡುವಂತೆ ಜಿಲ್ಲಾ ಪಂಚಾಯಿತಿ ಮೂಲಕ ವೇತನ ಬಿಡುಗಡೆಗೆ ಪ್ರಯತ್ನ ನಡೆಯುತ್ತಿದೆ’ ಎಂದು ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಆಯುಕ್ತ ಡಾ.ಎಂ.ಟಿ.ರೇಜು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.