ADVERTISEMENT

ಶಿಕ್ಷಕರ ವರ್ಗಾವಣೆ ಸ್ಥಗಿತಕ್ಕೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2018, 20:12 IST
Last Updated 31 ಅಕ್ಟೋಬರ್ 2018, 20:12 IST

ಬೆಂಗಳೂರು: ಮುಖ್ಯಮಂತ್ರಿ ಸೂಚನೆಯ ಮೇರೆಗೆ ಶಿಕ್ಷಣ ಇಲಾಖೆಯು ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವುದನ್ನುರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ(ಎಸ್‌ಡಿಎಂಸಿ) ಸಮನ್ವಯ ವೇದಿಕೆ ಸ್ವಾಗತಿಸಿದೆ.

‘ಮಕ್ಕಳ ಕಲಿಕೆ ಮತ್ತು ಸರ್ಕಾರಿ ಶಾಲೆಗಳ ಬಲವರ್ಧನೆಯ ದೃಷ್ಟಿಯಿಂದ ಈ ನಿರ್ಧಾರ ಸೂಕ್ತ ಮತ್ತು ಸಕಾಲಿಕವಾಗಿದೆ. ಅಧಿಕಾರಿಗಳು ಒಂದರ ಮೇಲೊಂದು ಸುತ್ತೋಲೆಗಳನ್ನು ಹೊರಡಿಸುತ್ತ ಮಕ್ಕಳ ಶಿಕ್ಷಣದ ಹಕ್ಕನ್ನು ಗೌರವಿಸುತ್ತಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಅರಾಜಕತೆ ಉಂಟಾಗಿರುವ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರೇ ಮಧ್ಯಪ್ರವೇಶ ಮಾಡಿ, ವರ್ಗಾವಣೆಯನ್ನು ನಿಲ್ಲಿಸಿದ್ದು ಉತ್ತಮ ನಡೆ’ ಎಂದು ವೇದಿಕೆ ಹೇಳಿದೆ.

‘ವರ್ಗಾವಣೆ ಕಾಯ್ದೆ ಹಾಗೂ ನಿಯಮಗಳು ಶಿಕ್ಷಕ ಸ್ನೇಹಿಗಿಂತ ಹೆಚ್ಚಾಗಿ ಮಕ್ಕಳ ಕಲಿಕಾ ಸ್ನೇಹಿ ಮತ್ತು ಸರ್ಕಾರಿ ಶಾಲೆಗಳ ಉಳಿವಿಗೆ ಕಾಯ್ದೆ ಪೂರಕವಾಗಿರಬೇಕು’ ಎಂದು ಪ್ರತಿಪಾದಿಸಿದೆ.

ADVERTISEMENT

‘ಶೈಕ್ಷಣಿಕ ವರ್ಷದ ಮಧ್ಯದಲ್ಲಿನ ವರ್ಗಾವಣೆಯಿಂದ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ನಿಗದಿ ಪಡಿಸಿರುವ ಶಿಕ್ಷಕರ ಕಾರ್ಯನಿರ್ವಹಣಾ ದಿನಗಳು
ಮತ್ತು ಬೋಧನಾ ಅವಧಿಗಳಲ್ಲಿ ವ್ಯತ್ಯಾಸ ಆಗಲಿದೆ. ಏಪ್ರಿಲ್‌, ಮೇ ತಿಂಗಳಿನಲ್ಲಿಯೇ ವರ್ಗಾವಣೆ ನಡೆಸಬೇಕು’ ಎಂದು ಒತ್ತಾಯಿಸಿದೆ.

‘ವರ್ಗಾವಣೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ ತಾಲ್ಲೂಕು, ಜಿಲ್ಲಾ ಮಟ್ಟದ ವೃಂದವೆಂದು ಪರಿಗಣಿಸಿ ಶಿಕ್ಷಕರನ್ನು ನೇಮಿಸಬೇಕು. ಅಗತ್ಯವಿದ್ದಲ್ಲಿ ಮಾತ್ರ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು’ ಎಂದು ಸಲಹೆ ನೀಡಿದೆ.

*ವರ್ಗಾವಣೆ ಪ್ರಕ್ರಿಯೆಯ ಕೌನ್ಸೆಲಿಂಗ್‌ ಅನ್ನು ಈ ವರ್ಷವೇ ಮುಗಿಸಲಿ. ಶಿಕ್ಷಕರನ್ನು ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ವರ್ಗವಾದ ಶಾಲೆಗಳಿಗೆ ನಿಯೋಜಿಸಲಿ

-ಮಾಲತೇಶ್‌ ಬೊಬ್ಬಜ್ಜಿ, ಅಧ್ಯಕ್ಷ, ರಾಜ್ಯ ಶಿಕ್ಷಕರ ವರ್ಗಾವಣೆ ಹೋರಾಟ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.