ADVERTISEMENT

ಶಿಕ್ಷಕರ ದಿನಾಚರಣೆ: ಅಕ್ಷರ ಕಲಿಸಿದ ಗುರುವಿಗೆ ನಮನ

ಶಾಲಾ–ಕಾಲೇಜುಗಳಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 16:13 IST
Last Updated 5 ಸೆಪ್ಟೆಂಬರ್ 2024, 16:13 IST
ನಗರದ ಸಿಎಂಆರ್‌ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಕೆ.ಪಿ.ಜೆ. ರೆಡ್ಡಿ, ಆರ್.ಎಸ್. ದೇಶಪಾಂಡೆ, ಕೆ.ಎನ್. ವೆಂಕಟಕೃಷ್ಣ ರಾವ್‌ ಅವರನ್ನು ಸನ್ಮಾನಿಸಲಾಯಿತು. ಕೆ.ಸಿ. ರಾಮಮೂರ್ತಿ ಭಾಗವಹಿಸಿದ್ದರು
ನಗರದ ಸಿಎಂಆರ್‌ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಕೆ.ಪಿ.ಜೆ. ರೆಡ್ಡಿ, ಆರ್.ಎಸ್. ದೇಶಪಾಂಡೆ, ಕೆ.ಎನ್. ವೆಂಕಟಕೃಷ್ಣ ರಾವ್‌ ಅವರನ್ನು ಸನ್ಮಾನಿಸಲಾಯಿತು. ಕೆ.ಸಿ. ರಾಮಮೂರ್ತಿ ಭಾಗವಹಿಸಿದ್ದರು   

ಬೆಂಗಳೂರು: ತಪ್ಪು ಮಾಡಿದಾಗ ಶಿಕ್ಷಿಸಿ, ತಿದ್ದಿ ಬುದ್ಧಿ ಹೇಳಿದ ಗುರುಗಳನ್ನು ಗೌರವಿಸುವ ಶಿಕ್ಷಕರ ದಿನಾಚರಣೆ ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ಸಂಭ್ರಮದಿಂದ ನೆರವೇರಿತು.

ನಗರದ ಸಿಎಂಆರ್‌ ವಿಶ್ವವಿದ್ಯಾಲಯದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮ ದಿನದ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ವಿಜ್ಞಾನಿ ಕೆ.ಪಿ.ಜೆ. ರೆಡ್ಡಿ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಸೆಕ್‌) ಮಾಜಿ ನಿರ್ದೇಶಕ ಆರ್.ಎಸ್. ದೇಶಪಾಂಡೆ, ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಕೆ.ಎನ್. ವೆಂಕಟಕೃಷ್ಣ ರಾವ್ ಅವರನ್ನು ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಸಿ. ರಾಮಮೂರ್ತಿ ಸನ್ಮಾನಿಸಿದರು.

ನಂತರ ಮಾತನಾಡಿದ ಕೆ.ಸಿ. ರಾಮಮೂರ್ತಿ, ‘ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರ ಕೊಡುಗೆ ದೊಡ್ಡದು. ಈ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಕೇವಲ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗದೆ, ಇಡೀ ಸಮಾಜ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಮೂಲಕ ಶಿಕ್ಷಕ ಸಮುದಾಯವನ್ನು ಗೌರವಿಸಬೇಕು’ ಎಂದು ಕರೆ ನೀಡಿದರು.

ADVERTISEMENT

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ಸಹ ಕುಲಾಧಿಪತಿ ಜಯದೀಪ್ ಕೆ.ಆರ್. ರೆಡ್ಡಿ, ಕುಲಪತಿ ಎಚ್.ಪಿ ರಾಘವೇಂದ್ರ ಭಾಗವಹಿಸಿದ್ದರು.

‘ಜೀವನಪರ್ಯಂತ ಶಿಕ್ಷಕರು’

ಶಿಕ್ಷಕರ ದಿನಾಚರಣೆಯ ಅಂಗವಾಗಿ ನ್ಯಾಷನಲ್‌ ಎಜುಕೇಶನ್‌ ಸೊಸೈಟಿ ವತಿಯಿಂದ ಬಸವನಗುಡಿಯ ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೊಸೈಟಿಯ (ಎನ್.ಇ.ಎಸ್) ಅಧ್ಯಕ್ಷ ಎಚ್.ಎನ್. ಸುಬ್ರಮಣ್ಯ ಮಾತನಾಡಿ, ‘ಒಮ್ಮೆ ಶಿಕ್ಷಕರಾದವರು ಜೀವನ ಪರ್ಯಂತ ಶಿಕ್ಷಕರಾಗಿರುತ್ತಾರೆ. ಸಮಾಜಕ್ಕೆ ಅವರು ಒಂದಲ್ಲಾ ಒಂದು ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತಾರೆ. ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು, ಬದುಕಿನಲ್ಲಿ ನಮಗೆ ಮಾರ್ಗದರ್ಶನ ಮಾಡಿದ ಶಿಕ್ಷಕರು ಸ್ಮರಣೀಯ. ಅವರನ್ನು ಗೌರವಿಸುವುದು ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು ಹಾಗೂ ಸಮಾಜದ ಕರ್ತವ್ಯ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಅನಂತ ರಂಗನ್, ಶೈರೀನ್ ನೇದುಂಗಡಿ, ಅರುಣಾಚಲಂ, ಎಚ್.ಜಿ. ಗೋಕುಲ್, ಸೋನಾರ್ ಮಾರುತಿ, ಜಯರಾಮಪ್ಪ, ಡಿ.ವಿ. ನಾಗೇಶ್, ಎಸ್.ಆರ್. ಪಂಕಜಾ, ಎ.ಜಿ. ನಾಗರಾಜಯ್ಯ ಅವರನ್ನು ಸನ್ಮಾನಿಸಲಾಯಿತು.

ಎನ್.ಇ.ಎಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ವಿ. ವೆಂಕಟಶಿವಾರೆಡ್ಡಿ, ಖಜಾಂಚಿ ವಿ. ಮಂಜುನಾಥ್, ಎನ್.ಸಿ.ಜೆ ಅಧ್ಯಕ್ಷ ಕೆ.ಎನ್. ರಾಮ್ ಮೋಹನ್ ಎನ್.ಇ.ಪಿ.ಎಸ್. ಅಧ್ಯಕ್ಷ ಜೆ. ಪಾವನ ಪಾಲ್ಗೊಂಡಿದ್ದರು.

ಎನ್.ಇ. ಎಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ವಿ. ವೆಂಕಟಾಶಿವಾರೆಡ್ಡಿ ಬಸವನಗುಡಿ ನ್ಯಾಷನಲ್ ಕಾಲೇಜಿನ ಅಧ್ಯಕ್ಷ ಜೆ. ಪಾವನ ಖಜಾಂಚಿ ವಿ. ಮಂಜುನಾಥ್ ಅವರು ನಿವೃತ್ತ ಶಿಕ್ಷಕ ಅನಂತ್ ರಂಗನ್ ಅವರನ್ನು ಸನ್ಮಾನಿಸಿದರು
ಬ್ಯಾಟರಾಯನಪುರದ ಶ್ರೀಶಾರದಾ ವಿದ್ಯಾಪೀಠದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಶಾಲಾ–ಕಾಲೇಜು ಶಿಕ್ಷಕರನ್ನು ಸನ್ಮಾನಿಸಲಾಯಿತು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಸಂಸ್ಥೆಯ ಪದಾಧಿಕಾರಿಗಳಾದ ಎನ್. ಕಾಮರಾಜ್ ಬಿ.ಎಂ. ಪಟೇಲ್ ಪಾಂಡು ಬಿ.ಎಂ. ಗಂಗಣ್ಣ ಬಿ.ಕೆ. ಜಯಕುಮಾರ್ ಆಶ್ವತ್ಥನಾರಾಯಣ್ ಟಿ. ರಾಮಣ್ಣ ಬಿ.ಎಚ್. ಕೃಷ್ಣ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.