ADVERTISEMENT

ಟೆಕ್‌ ಪಾರ್ಕ್‌ ಥಳುಕಿನ ಸುತ್ತಕೊಳಕು ರಸ್ತೆಗಳು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 19:30 IST
Last Updated 16 ಅಕ್ಟೋಬರ್ 2019, 19:30 IST
ಟ್ಯಾನರಿ ರಸ್ತೆಯಿಂದ ಥಣಿಸಂದ್ರ ಮುಖ್ಯರಸ್ತೆಗೆ ಸಾಗುವ ವಾಹನಗಳು ನಾಗವಾರ ಜಂಕ್ಷನ್‌ ತಲುಪಿದಾಗ..
ಟ್ಯಾನರಿ ರಸ್ತೆಯಿಂದ ಥಣಿಸಂದ್ರ ಮುಖ್ಯರಸ್ತೆಗೆ ಸಾಗುವ ವಾಹನಗಳು ನಾಗವಾರ ಜಂಕ್ಷನ್‌ ತಲುಪಿದಾಗ..   

ನಾಗವಾರ ಎಂದಾಕ್ಷಣ ದಶಕಗಳ ಹಿಂದಿನ ನಗರವಾಸಿಗಳಿಗೆ ಒಂದು ಹಳ್ಳಿಯ ನೆನಪು. ಈಗ ಅದೊಂದು ವಿಶ್ವ ಟೆಕಿಗಳ ಹೆಸರಾಂತ ಟೆಕ್‌ ಪಾರ್ಕ್‌. ಒಂದು ಹೊಸ ಪರಪಂಚ. ನೂರಾರು ಎಕರೆ ಪ್ರದೇಶದಲ್ಲಿಥಳಕು ಬಳುಕಿನ ಬೃಹತ್‌ ಕಟ್ಟಡಗಳ ತುಂಬ ತರಹೇವಾರಿ ಐಟಿ ಕಂಪನಿಗಳ ಭರ್ಜರಿ ವಹಿವಾಟು ನಡೆಯುತ್ತದೆ. ಇಂತಿಪ್ಪ ಈ ಟೆಕ್‌ದುನಿಯಾ ಸುತ್ತಮುತ್ತಲಿನ ರಸ್ತೆಗಳು, ಮೂಲ ಸೌಕರ್ಯಗಳು ಮಾತ್ರ ದಶಕಗಳ ಹಿಂದಿನ ಕುಗ್ರಾಮದ ಸ್ಥಿತಿಯನ್ನೇ ನೆನಪಿಸುತ್ತವೆ. ಇದು ವಾಸ್ತವ.

ಕಂಟೋನ್ಮೆಂಟ್‌ ರೈಲ್ವೆ ಸ್ಟೇಷನ್‌ನಿಂದ ಟ್ಯಾನರಿ ರಸ್ತೆ ಮತ್ತು ಅಲ್ಲಿಂದ ನೇರ ಥಣಿಸಂದ್ರ ಮುಖ್ಯ ರಸ್ತೆಗಿಳಿದರೆ ಸಿಗುವ ಅತ್ಯಂತ ಪ್ರಮುಖ ಜಂಕ್ಷನ್‌ ಎಂದರೆ ಅದು ನಾಗವಾರ. ಇಲ್ಲಿಂದ ಥಣಿಸಂದ್ರ, ಕೆಎನ್‌ಎಸ್‌ ಎಂಜಿನಿಯರಿಂಗ್‌ ಕಾಲೇಜು, ಹಜ್‌ ಭವನ, ಕೋಗಿಲು, ರೇವಾ ಕಾಲೇಜ್‌ ರಸ್ತೆ ಮೂಲಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬಹುದು. ಜಂಕ್ಷನ್‌ನಿಂದ ಕೆಲವೇ ನೂರು ಮೀಟರ್‌ ಅಂತರದಲ್ಲಿ ಮಾನ್ಯತಾ ಟೆಕ್‌ ಪಾರ್ಕ್‌ ಇದೆ. ತಕ್ಷಣದ ಜಂಕ್ಷನ್‌ ಹೆಬ್ಬಾಳ. ನಾಗವಾರ ಜಂಕ್ಷನ್‌ನಿಂದ ಬಲಕ್ಕೆ ಕೆಲವೇ ಕಿಮೀ ದೂರದಲ್ಲಿ ಹೆಣ್ಣೂರು ಜಂಕ್ಷನ್‌ ಇದೆ.

ನಾಗವಾರ ಜಂಕ್ಷನ್‌ನಲ್ಲಿ ಎರಡು ಲೈನ್‌ ಫ್ಲೈಓವರ್‌ ನಿರ್ಮಾಣಗೊಂಡು ವರ್ಷಗಳೇ ಕಳೆದಿವೆ. ಟ್ರಾಫಿಕ್‌ ಸಮಸ್ಯೆ ಅದರಿಂದ ಎಷ್ಟರಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ ಎನ್ನುವುದು ಬೇರೆ ವಿಚಾರ. ಆದರೆ, ಅದರ ಕೆಳಗಿನ ರಸ್ತೆಗಳು ಮಾತ್ರ ಎಷ್ಟೋ ಸಮಯದಿಂದ ಅದ್ವಾನ ಸ್ಥಿತಿಯಲ್ಲಿವೆ. ಆಗಾಗ ಒಂದಷ್ಟು ಪ್ಯಾಚ್‌ ವರ್ಕ್‌ ಪ್ರಯತ್ನಗಳ ಹೊರತಾಗಿಯೂ ರಸ್ತೆ ಮತ್ತೆ ಗುಂಡಿಗಳಿಂದಲೇ ತುಂಬಿರುತ್ತದೆ.

ADVERTISEMENT

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಾಗವಾರ ಜಂಕ್ಷನ್‌ ಸ್ಥಿತಿ ಇನ್ನೂ ಅದ್ವಾನವಾಗಿದೆ. ಮಳೆ ನೀರು ತುಂಬಿಕೊಂಡರಂತೂ ವಾಹನಗಳ ಫಜೀತಿ ಹೇಳತೀರದು. ಆಟೊ ರಿಕ್ಷಾಗಳು ಅಕ್ಷರಶಃ ದೋಣಿಗಳಂತೆ ಸಾಗುವುದನ್ನು ನೋಡಿದರೆ ಭಯವಾಗುತ್ತದೆ.

ಈತನಕ ಈ ಜಂಕ್ಷನ್‌ ಸುತ್ತಮುತ್ತಲಿನ ಮೋರಿಗಳು ಸೂಕ್ತ ಕಾರ್ಯ ನಿರ್ವಹಿಸುತ್ತಿಲ್ಲ. ಮೋರಿಗಳ ನಿರ್ಮಾಣದಲ್ಲಿ ಸಂಬಂಧಪಟ್ಟ ಇಲಾಖೆಗಳು ಎಷ್ಟರಮಟ್ಟಿಗೆ ಕಾಳಜಿ ವಹಿಸಿವೆ ಎನ್ನುವುದು ಕಣ್ಣಿಗೆ ರಾಚುವಂತಿದೆ. ಇರುವ ಮೋರಿಗಳಲ್ಲಿ ಬರಿ ಕಸ, ಮಣ್ಣು ತುಂಬಿಕೊಂಡು ಮಳೆ ನೀರು ಹರಿದು ಹೋಗುವುದಕ್ಕೂ ಅವಕಾಶವಾಗುತ್ತಿಲ್ಲ. ಹೀಗಾಗಿ ಸುರಿದ ಮಳೆಯ ನೀರೆಲ್ಲವೂ ಫ್ಲೈಓವರ್‌ ಕೆಳಗಿನ ಪ್ರದೇಶದಲ್ಲಿ ಜಮಾವಣೆಯಾಗಿ ದೊಡ್ಡ ಗುಂಡಿಗಳು ನಿರ್ಮಾಣಗೊಂಡಿವೆ. ಹೆಣ್ಣೂರು ಕಡೆಯ ಸರ್ವೀಸ್‌ ರಸ್ತೆ ಅದರಲ್ಲೂ ನಾಗವಾರ ಶಾಲೆಯ ಮುಂದಿನ ರಸ್ತೆ ಅದೆಷ್ಟು ವರ್ಷಗಳ ಕಾಲ ಕಾಮಗಾರಿಗಳಿಂದ ಸುಸ್ತಾದಂತಿದೆ. ಅಲ್ಲಿ ವಾಹನ ಸಂಚಾರ ಅಸಾಧ್ಯ ಎನ್ನುವಂತಾಗುವುದರಿಂದ ಫ್ಲೈಓವರ್‌ ನಡುವಿನ ರಸ್ತೆಯಲ್ಲಿ ವಾಹನದಟ್ಟಣೆ ಹೆಚ್ಚುತ್ತಿದೆ.

ಇದೇ ಸ್ಥಿತಿ ಸಾರಾಯ್‌ಪಾಳ್ಯ ಸಮೀಪದ ಎಲಿಮೆಂಟ್ಸ್‌ ಮಾಲ್‌ ಪ್ರದೇಶ ಮತ್ತು ಥಣಿಸಂದ್ರ ಸರ್ಕಲ್‌ನಲ್ಲೂ ಮುಂದುವರಿದಿದೆ. ಇದರಿಂದ ಈ ಪ್ರದೇಶದಲ್ಲಿ ವಾಹನ ಸಂಚಾರ ಅತ್ಯಂತ ಅಪಾಯಕಾರಿ ಎನಿಸತೊಡಗಿದೆ. ಇದರ ಜೊತೆಗೆ ಬಿಡಬ್ಲುಎಸ್‌ಎಸ್‌ಬಿ ಕಾಮಗಾರಿ ಕೂಡ ರಸ್ತೆ ಸಂಚಾರವನ್ನು ಮತ್ತಷ್ಟು ದುಸ್ತರಗೊಳಿಸಿದೆ. ಹಲವು ತಿಂಗಳಿಂದ ನಡೆಯುತ್ತಿರುವ ಕಾಮಗಾರಿ ಕುಂಟುತ್ತಲೇ ಸಾಗಿದೆ.

ಥಣಿಸಂದ್ರ ಮುಖ್ಯರಸ್ತೆಯ ಕೆ. ನಾರಾಯಣಪುರ ಸರ್ಕಲ್‌ಗೆ ಅಡ್ಡಲಾಗಿ ರಾಷ್ಟ್ರೋತ್ಥಾನ ಶಾಲೆ ಮತ್ತು ಅಲ್‌ಮನ್ಸೂರ್‌ ಅರೇಬಿಕ್‌ ಶಾಲೆ ಮುಂದೆ ನಿರ್ಮಾಣವಾಗುತ್ತಿರುವ ಫ್ಲೈಓವರ್‌ ಕಾಮಗಾರಿ ಭರದಿಂದ ಪ್ರಾರಂಭಗೊಂಡಿತಾದರೂ ಇತ್ತೀಚೆಗೆ ವೇಗದ ಹಾದಿ ಹಿಡಿದಿದೆ. ಅಕ್ಕಪಕ್ಕದ ಕಿರಿದಾದ ರಸ್ತೆಗಳಲ್ಲಿ ಮಳೆ ಬಂದರೆ ನೀರು ತುಂಬಿಕೊಳ್ಳುತ್ತದೆ. ಇಲ್ಲಿಯೂ ಅದೇ ಅದ್ವಾನದ ಸ್ಥಿತಿ.

ಹೆಗಡೆ ನಗರ, ಸಂಪಿಗೆಹಳ್ಳಿ ಪೊಲೀಸ್‌ ಠಾಣೆ, ಚೊಕ್ಕನಹಳ್ಳಿ ರಸ್ತೆಯುದ್ದಕ್ಕೂ ಗುಂಡಿಗಳು ಬೀಳುತ್ತವೆ. ತೇಪೆ ಹಚ್ಚುವ ಕೆಲಸ ಆಗಾಗ ನಡೆಯುತ್ತದಾದರೂ ಮತ್ತೆ ಮತ್ತೆ ಇದೇ ಸ್ಥಿತಿ ಮುಂದುವರಿದು ವಾಹನ ಸವಾರರು ಹಿಡಿಶಾಪ ಹಾಕುವಂತಾಗುವುದು ಇಲ್ಲಿ ಮಾಮೂಲು.

ಈ ಪರಿಸ್ಥಿತಿ ಬಹುಕಾಲದಿಂದ ಮುಂದುವರಿಯುತ್ತಲೇ ಬಂದಿದೆ. ಏನೇನೋ ಕಾಮಗಾರಿಗಳ ಸಬೂಬು ಹೇಳಿಕೊಂಡು ಶಾಶ್ವತ ಪರಿಹಾರಗಳನ್ನು ಮುಂದೂಡುತ್ತಲೇ ಬರಲಾಗುತ್ತಿದೆ. ಶಾಶ್ವತ ಪರಿಹಾರದ ಮಾತು ಹಾಗಿರಲಿ ತಕ್ಷಣದ ಅನಾಹುತಗಳನ್ನು ತಪ್ಪಿಸಲು ಕೆಲವು ಕ್ರಮಗಳನ್ನಾದರೂ ಕೈಗೊಳ್ಳದಿದ್ದರೆ ಹೇಗೆ ಎನ್ನುವ ಸಿಟಿಜನರ ಕೂಗು ಕೇಳಿಸಿಕೊಳ್ಳುವ ಸೌಜನ್ಯವನ್ನು ಆಡಳಿತ ಇನ್ನಾದರೂ ತೋರಿಸಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.