ಬೆಂಗಳೂರು: ನವೆಂಬರ್ 16ರಿಂದ ಮೂರು ದಿನ ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ (ಬಿಟಿಎಸ್) ಪೂರ್ವಭಾವಿಯಾಗಿ ಜಾಗತಿಕ ನಾವಿನ್ಯತಾ ಸಹಭಾಗಿ(ಜಿಐಎ) ರಾಷ್ಟ್ರಗಳ ಪ್ರತಿನಿಧಿಗಳ ಜತೆ ಐಟಿ–ಬಿಟಿ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಬುಧವಾರ ಸಮಾಲೋಚನೆ ನಡೆಸಿದರು.
ಜಿಐಎ ರಾಷ್ಟ್ರಗಳ ಕಾನ್ಸುಲ್ ಜನರಲ್, ಡೆಪ್ಯುಟಿ ಕಾನ್ಸುಲ್ ಜನರಲ್ ಮತ್ತು ಗೌರವ ಕಾನ್ಸುಲ್ ಜನರಲ್‌ಗಳ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಸಚಿವರು, ‘25ನೇ ವರ್ಷದ ಈ ಶೃಂಗಸಭೆಯನ್ನು ಅರ್ಥಪೂರ್ಣವಾಗಿ ನಡೆಸಲು ಉದ್ದೇಶಿಸಲಾಗಿದೆ. ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ’ ಎಂದರು.
‘ಅರಮನೆ ಮೈದಾನದಲ್ಲಿ ನಡೆಯುವ ಶೃಂಗಸಭೆಯಲ್ಲಿ 50ಕ್ಕೂ ಹೆಚ್ವು ದೇಶಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿವೆ. 500ಕ್ಕೂ ಹೆಚ್ಚು ವಸ್ತು ಪ್ರದರ್ಶನ, 300ಕ್ಕೂ ಹೆಚ್ಚು ಮಂದಿ ಗೋಷ್ಠಿಗಳಲ್ಲಿ ಮಾತನಾಡಲಿದ್ದಾರೆ. 50 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ವಿವಿಧ ದೇಶಗಳ ರಾಜತಾಂತ್ರಿಕ ಪ್ರತಿನಿಧಿಗಳು ಮಾತನಾಡಿ, ‘ಸೈಬರ್ ಸೆಕ್ಯುರಿಟಿ, ಏರೋಸ್ಪೇಸ್, ರೋಬೋಟಿಕ್ಸ್, ಐಒಟಿ, ಅಗ್ರಿಟೆಕ್, ಫಿನ್ಟೆಕ್, ಮೆಡ್-ಟೆಕ್ ಮುಂತಾದ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಕರ್ನಾಟಕದ ಜತೆ ಸಹಭಾಗಿತ್ವ ಸ್ಥಾಪನೆ ಒಲವಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.