ಬೆಂಗಳೂರು: ಸಾರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿರುವುದರಿಂದ ಕೆಲವು ದಿನಗಳಿಂದ ವಾಹನ ನೋಂದಣಿ ಸ್ಥಗಿತಗೊಂಡಿದೆ.
ಸೋಮವಾರದಿಂದಲೇ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ದೀಪಾವಳಿ ಹಬ್ಬದ ಸಮಯದಲ್ಲಿ ಹೊಸ ವಾಹನ ನೋಂದಣಿ ಮಾಡಲು ಉತ್ಸಾಹ ತೋರಿದವರಿಗೆ ನಿರಾಸೆ ಉಂಟಾಗಿದೆ. ರಾಜ್ಯದ ವಾಹನ ವಿತರಕರು ನಾಲ್ಕು ದಿನಗಳಿಂದ ಪ್ರಯತ್ನಿಸುತ್ತಿದ್ದಾರೆ.
‘ವಾಹನ ಖರೀದಿಗೆ ಹಬ್ಬದ ದಿನಗಳು ಮಂಗಳಕರ ಎಂದು ತಿಳಿದು ವಾಹನ ಖರೀದಿಗೆ ಮುಂದಾಗಿದ್ದ ನಮ್ಮ ಅನೇಕ ಗ್ರಾಹಕರಿಗೆ ನಿರಾಸೆಯಾಗಿದೆ. ನೋಂದಣಿ ಮಾಡದೇ ವಿತರಣೆ ಮಾಡಲು ಸಾಧ್ಯವಿಲ್ಲ. ನೋಂದಣಿಗಿಂತ ಮೊದಲೇ ವಿತರಿಸಿದರೆ ಸಮಸ್ಯೆಗಳು ಎದುರಾಗುತ್ತವೆ’ ಎಂದು ನಗರದ ಯಮಹಾ ಡೀಲರ್ ವಿಲ್ಸನ್ ಪ್ರಭು ಟಿ.ಎಂ. ತಿಳಿಸಿದರು.
ಪ್ರತಿವರ್ಷ ಹಬ್ಬದ ಸಮಯದಲ್ಲಿ ವಾಹನಗಳ ಮಾರಾಟ ಗರಿಷ್ಠ ಮಟ್ಟಕ್ಕೆ ತಲುಪುತ್ತಿತ್ತು. ದಿನಕ್ಕೆ ಸರಾಸರಿ 15 ವಾಹನಗಳು ಮಾರಾಟವಾಗುತ್ತಿದ್ದವು. ಈ ವರ್ಷ ವೆಬ್‌ಸೈಟ್ ಸಮಸ್ಯೆಯಿಂದಾಗಿ ಹೊಡೆತ ಬಿದ್ದಿದೆ. ಸದ್ಯ 50 ವಾಹನಗಳ ನೋಂದಣಿ ಬಾಕಿ ಇದ್ದು, ಶೇ 10ರಷ್ಟು ಗ್ರಾಹಕರು ಬುಕ್ಕಿಂಗ್ ರದ್ದುಗೊಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಹಬ್ಬಗಳ ಸಮಯದಲ್ಲಿ ರಾಜ್ಯದಾದ್ಯಂತ ನಿತ್ಯ ಕನಿಷ್ಠ 750 ವಾಹನಗಳು ನೋಂದಣಿಯಾಗುತ್ತಿದ್ದವು. ಅದರಲ್ಲಿ 500ರಷ್ಟು ಕಾರುಗಳೇ ಇರುತ್ತಿದ್ದವು. ಈ ಬಾರಿ ಸುಮಾರು 2,000 ವಾಹನಗಳ ನೋಂದಣಿ ಬಾಕಿ ಉಳಿದಿದೆ ಎಂದು ಕಾರು ಡೀಲರ್ ಸಂಸ್ಥೆಯ ನಿರ್ದೇಶಕರೊಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.